ಉಡುಪಿ : ಆರು ಲಕ್ಷಕ್ಕೂ ಹೆಚ್ಚು ಮಕ್ಕಳಿಂದ ಶತಕೋಟಿಯೆಡೆಗೆ ರಾಮ ಜಪ

ಉಡುಪಿ : ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಶತಮಾನಗಳ ಕನಸು ನನಸಾಗುತ್ತಿದೆ. ಆದ್ದರಿಂದ ನೂತನ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯವರೆಗೆ ದೇಶದಲ್ಲಿ ಎಲ್ಲ ವಯೋಮಾನದ, ಎಲ್ಲ ಜಾತಿ ಸಮುದಾಯಗಳ ವಿವಿಧ ವೃತ್ತಿ ಕ್ಷೇತ್ರಗಳ ರಾಮನ ವಿಶೇಷ ಸ್ಮರಣೆ, ಸೇವಾ ಕಾರ್ಯಗಳು ನಡೆಯುತ್ತಿವೆ.



ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಎಲ್ಲೆಡೆ ಇದನ್ನು ಉಲ್ಲೇಖಿಸುತ್ತಿದ್ದಾರೆ. ಅದರಂತೆ ಈ ಅಧಿಕ ಮಾಸದಲ್ಲಿ ದಶಕೋಟಿ ಸಾಮೂಹಿಕ ರಾಮಜಪ ಯಜ್ಞ ನಡೆಸುವಂತೆಯೂ ಕರೆ ನೀಡಿದ್ದರು.

ಶ್ರೀಗಳ ಮನವಿಗೆ ಭರಪೂರ ಸ್ಪಂದನೆ ದೊರಕಿದ್ದು. ಎಲ್ಲರೂ ಅತ್ಯಂತ ಸಂತೋಷದಿಂದಲೇ ಇದಕ್ಕೆ ಸಮ್ಮತಿಸಿದ್ದರು. ಪರಿಣಾಮವಾಗಿ ರಾಜ್ಯದ 30 ಕ್ಕೂ ಅಧಿಕ ಜಿಲ್ಲೆಗಳ 880 ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳ ಸುಮಾರು 6 ಲಕ್ಷಕ್ಕೂ ಅಧಿಕ ಮಕ್ಕಳ ಬಾಯಲ್ಲಿ ಕೋಟಿ ಕೋಟಿ ಸಂಖ್ಯೆಯಲ್ಲಿ ಸಾಮೂಹಿಕ ರಾಮಜಪದ ಕಲರವ ಅನುರಣಿಸುತ್ತಿದೆ.

ಅಧಿಕ ಶ್ರಾವಣ ಮಾಸವನ್ನು ನೆಪವಾಗಿಟ್ಟುಕೊಂಡು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಹೊತ್ತಲ್ಲಿ ಮಕ್ಕಳಿಂದ ಆರಂಭಿಸಿ ಹಿರಿಯರವರೆಗೆ ಎಲ್ಲರೂ ರಾಮನ ಸ್ಮರಣೆ ಮಾಡಿ ಎಲ್ಲರ ಒಳಿತಿಗೆ ಪ್ರಾರ್ಥಿಸುವಂತಾಗಲಿ ಎಂಬ ಉದ್ದೇಶದಿಂದ ದಶಕೋಟಿ ರಾಮಯಜ್ಞಕ್ಕೆ ಕರೆಕೊಟ್ಟಿದ್ದೆವು. ಇದಕ್ಕೆ ನೂರಾರು ಶಿಕ್ಷಣ ಸಂಸ್ಥೆಗಳು ಹಾಗೂ ಅನೇಕ ಸಂಘ ಸಂಸ್ಥೆಗಳು ಹೃತ್ಪೂರ್ವಕ ಸ್ಪಂದಿಸಿದ್ದರಿಂದ ಲಕ್ಷಾಂತರ ಮಕ್ಕಳು ರಾಮಜಪವನ್ನು ಶ್ರದ್ಧೆಯಿಂದ ಮಾಡುತ್ತಿರುವುದನ್ನು ತಿಳಿದು ಅಚ್ಚರಿ ಮತ್ತು ಅತೀವ ಸಂತಸವಾಗುತ್ತಿದೆ. ಆ ಎಲ್ಲರನ್ನೂ ಅಭಿನಂದಿಸುತ್ತಾ ಈ ಜಪಯಜ್ಞದ ಫಲವಾಗಿ ನಾಡು, ದೇಶ ಮತ್ತು ಲೋಕದ ಶಾಂತಿ ಸುಭಿಕ್ಷೆ ನೆಲೆಗೊಳಿಸುವಂತೆ ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇವೆ ಎಂದು ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.

You cannot copy content from Baravanige News

Scroll to Top