ಉಡುಪಿ : ಆರ್ಥಿಕವಾಗಿ ತೀರಾ ಹಿಂದುಳಿದವರಿಗಾಗಿ ಕರ್ನಾಟಕ ಸರಕಾರ ರೂಪಿಸಿರುವ ‘ಬೆಳಕು’ ಯೋಜನೆಯಡಿ ಗುರುತಿಸಲ್ಪಟ್ಟು ಮನೆಯ ವಯರಿಂಗ್ ಮಾಡಿಸಿ ನಾಲ್ಕು ವರ್ಷ ಕಳೆದರೂ ಮೆಸ್ಕಾಂ ಅಧಿಕಾರಿಗಳು ಫಲಾನುಭವಿ ಬಡ ಮಹಿಳೆಯೋರ್ವರಿಗೆ ವಿದ್ಯುತ್ ಸಂಪರ್ಕ ನೀಡದೇ ಸತಾಯಿಸುತ್ತಿರುವ ಶಿಕ್ಷಾರ್ಹ ಪ್ರಕರಣವೊಂದು ಕುಂದಾಪುರ ತಾಲೂಕಿನ ಸೌಕೂರು ಎಂಬ ತೀರಾ ಗ್ರಾಮೀಣ ಪ್ರದೇಶದಿಂದ ವರದಿಯಾಗಿದೆ.
ಇಡೀ ಪ್ರಕರಣದಲ್ಲಿ ಆಶ್ಚರ್ಯದ ವಿಷಯವೆಂದರೆ, ಜಿಲ್ಲಾಧಿಕಾರಿಗಳು ಸೇರಿದಂತೆ ಮೂರು ನ್ಯಾಯಾಧಿಕರಣಗಳು ತನಿಖೆ ನಡೆಸಿ ಆದೇಶ ನೀಡಿದ ಮೇಲೂ ಪಕ್ಕದ ಮನೆಯವರ ತಕರಾರು ಇದೆ ಎಂಬ ಕ್ಷುಲ್ಲಕ ಕಾರಣ ನೀಡಿ ಮೆಸ್ಕಾಂ ಅಧಿಕಾರಿಗಳು ಸೌಕೂರಿನ ಮಾಲತಿ ದೇವಾಡಿಗರಿಗೆ ವಿದ್ಯುತ್ ಸಂಪರ್ಕವನ್ನು ನಿರಾಕರಿಸಿದ್ದಾರೆ.
ಬೇರೆ ದಾರಿ ಕಾಣದೇ ಸಂತ್ರಸ್ಥೆ ಮಾಲತಿ ಅದೇ ಡಿಸೆಂಬರ್ ತಿಂಗಳಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ವನ್ನು ಆಶ್ರಯಿಸಿದರು. ಮಾಲತಿ ನೀಡಿದ ಎಲ್ಲಾ ದಾಖಲೆಗಳನ್ನು ಲಗೀಕರಿಸಿ ಮೆಸ್ಕಾಂನ ಕೆಳಗಿನ ಹಾಗೂ ಮೇಲಿನ ಅಧಿಕಾರಿಗಳಿಗೆ ಪ್ರತ್ಯೇಕ ಪತ್ರಗಳನ್ನು ಬರೆದು ಇನ್ನಾವುದೇ ಸಬೂಬು ಹೇಳದೆ ಈ ಕೂಡಲೇ ಮಾಲತಿ ಅವರ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಪ್ರತಿಷ್ಠಾನ ಆಗ್ರಹಿಸಿತು, ಆದರೆ ಕಳೆದ 10 ತಿಂಗಳುಗಳಿಂದ ಮೆಸ್ಕಾಂನ ಮೇಲಿನ ಹಾಗೂ ಕೆಳಗಿನ ಅಧಿಕಾರಿಗಳು ಪರಸ್ಪರ ಪತ್ರಗಳ ಮೇಲೆ ಪತ್ರ ಬರೆದು ಕೈತೊಳೆದು ಕೊಳ್ಳುತ್ತಿದ್ದಾರೆಯೇ ಹೊರತು ಯಾರೂ ವಿದ್ಯುತ್ ಸಂಪರ್ಕ ನೀಡಲು ಮುಂದಾಗುತ್ತಿಲ್ಲ ಎಂದು ಡಾ.ಶಾನ್‌ಭಾಗ್ ದೂರಿದರು.
ಈ ಅನ್ಯಾಯದ ವಿರುದ್ಧ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಹಾಗೂ ನ್ಯಾಯಾಂಗ ನಿಂದನಾ ದಾವೆ ಹೂಡಲು ಸಂತ್ರಸ್ತೆ ಮಾಲತಿ ಅವರಿಗೆ ಪ್ರತಿಷ್ಠಾನದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದ ಅವರು, ಇನ್ನು ಮುಂದೆ ಯಾವುದೇ ಅಧಿಕಾರಿ ಇಂತಹ ಅನ್ಯಾಯ ಮಾಡದಿರುವಂತೆ ನೋಡಿಕೊಳ್ಳಲು ಈ ಮೇಲಿನ ಮೂರು ದಾವೆಗಳಲ್ಲಿ ಮಾಲತಿ ದೇವಾಡಿಗ ಅನಾವಶ್ಯಕವಾಗಿ ವ್ಯಯಿಸಿದ ಪ್ರತಿಯೊಂದು ರೂಪಾಯಿಯನ್ನು ಇದಕ್ಕೆ ಕಾರಣೀಕರ್ತರಾದವರಿಂದ ವಸೂಲಿ ಮಾಡಲು ಪ್ರಯತ್ನಿಸಲಾಗುವುದು ಎಂದರು.