Wednesday, September 18, 2024
Homeಸುದ್ದಿಪರಶುರಾಮ ಥೀಂ ಪಾರ್ಕ್‌ ನಿರ್ಮಾಣಕ್ಕೆ ಜಮೀನೇ ಮಂಜೂರಾಗಲಿಲ್ಲ - ಕಾಂಗ್ರೆಸ್ ವಕ್ತಾರ ಶುಭದ ರಾವ್

ಪರಶುರಾಮ ಥೀಂ ಪಾರ್ಕ್‌ ನಿರ್ಮಾಣಕ್ಕೆ ಜಮೀನೇ ಮಂಜೂರಾಗಲಿಲ್ಲ – ಕಾಂಗ್ರೆಸ್ ವಕ್ತಾರ ಶುಭದ ರಾವ್

ಕಾರ್ಕಳ, ಆ.08: ಕಾರ್ಕಳದ ಬೈಲೂರ್‌ನಲ್ಲಿ ತುಳುನಾಡಿನ ಸೃಷ್ಟಿಕರ್ತ ಪರಶುರಾಮನಿಗೆ ಪರಶುರಾಮ ಥೀಂ ಪಾರ್ಕ್ ನಿರ್ಮಾಣಗೊಳಿಸಿ ಕಾರ್ಕಳವನ್ನು ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಗೊಳಿಸಿದ್ದೇನೆ ಎಂದು ಹೇಳುತ್ತಿದ್ದ ಶಾಸಕರ ಸಾಧನೆಗೆ ಪೂರಕವಾದ ದಾಖಲೆಗಳೇ ಇಲ್ಲದೆ ಸಾರ್ವಜನಿಕರ ಆಕ್ಷೇಪಗಳಿಗೆ ಕಾರಣವಾಗುತ್ತಿರುವ ಸತ್ಯಾಸತ್ಯತೆಗಳು ಬೆಳಕಿಗೆ ಬಂದಿವೆ.

ಕಾರ್ಕಳ ಎರ್ಲಪಾಡಿಯ ಉಮ್ಮಿಕಲ್ ಬೆಟ್ಟದಲ್ಲಿ ಪರಶುರಾಮನ ಪಾರ್ಕ್ ನಿರ್ಮಾಣಗೊಂಡಿರುವ ಜಮೀನು ಗೋಮಾಳ ಜಮೀನು ಆದ ಕಾರಣ ಮಂಜೂರಾತಿ ಪ್ರಸ್ತಾವನೆಯನ್ನು ತಿರಸ್ಕರಿಸಿ ಬಿಜೆಪಿ ಸರಕಾರವೇ ಅದೇಶ ಹೊರಡಿಸಿದೆ. ಹಾಗಾದರೆ ಪರಶುರಾಮ ಥೀಂ-ಪಾರ್ಕ್ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದೆಯೇ ? ಮುಂದೆ ಅದರ ನಿರ್ವಹಣೆಯ ಜವಾಬ್ದಾರಿ ಯಾರ ಹೊಣೆ ? ಎಂದು ಪುರಸಭಾ ಸದಸ್ಯ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

ಎರ್ಲಪಾಡಿ ಗ್ರಾಮದ ಸರ್ವೆ ನಂ.329/1ರಲ್ಲಿ 1.58 ಎಕ್ರೆ ಜಮೀನು ಗೋಮಾಳ ಜಮೀನಾಗಿದ್ದು, ಅದರಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ ಪಾರ್ಕ್‌ಗೆ ಆ ಜಾಗವನ್ನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ಕಾರ್ಕಳ ತಹಶೀಲ್ದಾರ್ ಎರ್ಲಪಾಡಿ ಗ್ರಾ.ಪಂ.ಗೆ ನೀಡಿರುವ ಆದೇಶದಿಂದ ಕೋಟ್ಯಾಂತರ ರೂಪಾಯಿ ಸರಕಾರದ ಅನುದಾನ ಬಳಕೆ ಮಾಡಿ ನಿರ್ಮಾಣಗೊಂಡ ಥೀಂ ಪಾರ್ಕ್ ಕಾನೂನು ಬಾಹಿರ ಅಭಿವೃದ್ಧಿ ಎನ್ನುವುದು ಸಾಬೀತಾಗಿದೆ.

2019 ರ ನ.8 ರಂದು ಎರ್ಲಪಾಡಿ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಈ ಜಮೀನನ್ನು ಪರಶುರಾಮ ಥೀಂಪಾರ್ಕ್ ನಿರ್ಮಾಣ ಮಾಡುವ ಉದ್ದೇಶಕ್ಕೆ ಕಾಯ್ದಿರಿಸುವಂತೆ ನಿರ್ಣಯ ಮಾಡಿ ಪ್ರಸ್ತಾವನೆಯನ್ನು ತಹಶೀಲ್ದಾರ್‌ಗೆ ಸಲ್ಲಿಸಿತ್ತು. ಡೀಮ್ಡ್ ಫಾರೆಸ್ಟ್, ಗೋಮಾಳ ಎನ್ನುವ ಕಾರಣಗಳಿಂದ ಗ್ರಾ.ಪಂ., ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಹಾಗೂ ಸರಕಾರದ ಕಂದಾಯ ಅಧೀನ ಕಾರ್ಯದರ್ಶಿವರೆಗೂ ಪತ್ರ ವ್ಯವಹಾರ ನಡೆಯುತ್ತಲೇ ಇತ್ತು. ಆದರೆ ಇನ್ನೊಂದೆಡೆ ಯಾವುದೇ ಅನುಮೋದನೆ ಇಲ್ಲದೆ ಸರಕಾರದ ಗರಿಷ್ಠ ಪ್ರಮಾಣದ ಅನುದಾನ ಅನಧೀಕೃತವಾಗಿ ಈ ಉಮಿಕಲ್ಲ್ ಬೆಟ್ಟದ ಮೇಲೆ ಸುರಿಯಿತು. ತಮ್ಮದೇ ಸರಕಾರ, ತಾನು ಮಾಡಿದ್ದೇ ಸರಿ ಎನ್ನುವ ರೀತಿ ನಡೆದುಕೊಂಡ ಶಾಸಕರು ರಾಜ್ಯದ ಮುಖ್ಯ ಮಂತ್ರಿಯನ್ನೇ ಉದ್ಘಾಟನೆಗೆ ಕರೆಸಿ ಪ್ರಚಾರ ಗಿಟ್ಟಿಸಿಕೊಂಡರು. ಮೂರು ದಿನಗಳ ಕಾಲ ನಡೆದ ಅದ್ದೂರಿಯ ಕಾರ್ಯಕ್ರಮ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಂತೆ ನಡೆಯಿತು. ಪರಶುರಾಮನ ವಿಗ್ರಹದ ದರ್ಶನಕ್ಕೆ ಲಕ್ಷಾಂತರ ಜನ ಆಗಮಿಸಿರುವುದೂ ಕಂಡು ಬಂತು. ಕೊನೇ ಕ್ಷಣದಲ್ಲಿ ಇವೆಲ್ಲವುಗಳು ಕಾನೂನು ಬಾಹಿರ ಎನ್ನುವುದು ಸಾಬೀತಾಗುತ್ತಿದ್ದಂತೆ ಕಾರ್ಕಳದ ಪ್ರಜ್ಞಾವಂತ ಜನತೆ ಮೌನ ಮುರಿಯುವಂತೆ ಮಾಡಿದೆ.

ಮಾರ್ಚ್ 15 ರಂದು ಸರಕಾರದ ಆಧೀನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗೆ ಪತ್ರ ಬರೆದು ಥೀಂ ಪಾರ್ಕ್ ನಿರ್ಮಾಣಕ್ಕಾಗಿ ಎರ್ಲಪಾಡಿ ಗ್ರಾಮ ಪಂಚಾಯತ್ ಹೆಸರಿನಲ್ಲಿ ಕಾಯ್ದಿರಿಸಿದ ಜಮೀನು ಗೋಮಾಳ ಜಮೀನಾಗಿದ್ದು, ಆ ಜಮೀನನ್ನು ಪ್ರಸ್ತಾವಿತ ಉದ್ದೇಶಕ್ಕೆ ಮಂಜೂರು ಮಾಡಲು ಅವಕಾಶವಿಲ್ಲದಿರುವುದರಿಂದ ಈ ಪ್ರಸ್ತಾವನೆಯನ್ನು ತಿರಸ್ಕರಿಸಿ ಆದೇಶಿಸಿರುತ್ತಾರೆ. 22:05:2023 ರಲ್ಲಿ ಇದೇ ಆದೇಶವನ್ನು ಉಡುಪಿ ಜಿಲ್ಲಾಧಿಕಾರಿಗಳು ಕಾರ್ಕಳ ತಹಶೀಲ್ದಾರರಿಗೆ ಜಾರಿ ಮಾಡಿದ್ದಾರೆ. 5:07:2023 ರಂದು ತಹಶೀಲ್ದಾರರು ಎರ್ಲಪಾಡಿ ಗ್ರಾ.ಪಂ. ಪಿಡಿಓಗೆ ಆದೇಶವನ್ನು ನೀಡಿ ಗೋಮಾಳ ಜಮೀನನ್ನು ಮಂಜೂರಾತಿ ಮಾಡಲು ಅವಕಾಶವಿಲ್ಲ ಎಂದು ಗ್ರಾ.ಪಂ.ನೀಡಿರುವ ಅರ್ಜಿಯನ್ನು ಯಾವುದೇ ಕ್ರಮವಿಲ್ಲದೆ ಮುಕ್ತಾಯಗೊಳಿಸಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಪರಶುರಾಮ ಥೀಂ ಪಾರ್ಕಿಗೆ ಹಿಂದಿನ ಬಿಜೆಪಿ ಸರಕಾರವೇ ಜಾಗವನ್ನು ನೀಡದೆ ಪ್ರಸ್ತಾವನೆಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದೆ ಎಂಬುವುದು ಜಗಜ್ಜಾಹೀರು ಆಗಿದೆ ಎಂದು ಸುನೀಲ್ ಕುಮಾರ್ ರವರು ಸಚಿವರಾಗಿದ್ದರೂ ಪಾರ್ಕ್ ನಿರ್ಮಾಣಕ್ಕೆ ಜಮೀನು ಕೊಡಿಸಲು ಸಾದ್ಯವಾಗದೆ ಕಾನೂನು ಬಾಹಿರ ಕಾಮಗಾರಿ ನಡೆಸಿದ ಉದ್ದೇಶವೇನು?

ಜಮೀನು ಮಂಜೂರಾಗಲಿಲ್ಲ ಎಂದಾದ ಮೇಲೆ ಅಷ್ಟು ದೊಡ್ಡ ಮೊತ್ತದ ಅನುದಾನ ಬಿಡುಗಡೆ ಹೇಗೆ ಸಾಧ್ಯವಾಯಿತು? ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ (ಕೆಪಿಟಿಸಿಎಲ್, ಸಿಎಸ್‌ಆರ್) ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಸೇರಿದಂತೆ ಒಟ್ಟು 6,71,92,943 ಕೋಟಿ ರೂ. ಬಿಡುಗಡೆಗೊಂಡಿದ್ದು, ಅನುಮೋದನೆ ಇಲ್ಲದ ಕಾಮಗಾರಿಗೆ ಸರಕಾರ ಕಾರ್ಯಾದೇಶವನ್ನು ನೀಡಲು ಸಾದ್ಯವಿದೆಯೇ? ಸರಕಾರದ ಯಾವುದೇ ಕಾರ್ಯದೇಶವಿಲ್ಲದೆ ನಿರ್ಮಿತಿ ಕೇಂದ್ರ ಇಷ್ಟೇಲ್ಲಾ ಕಾಮಗಾರಿಗಳನ್ನು ಯಾವ ಆಧಾರದ ಮೇಲೆ ಮಾಡಿದೆ ? ಮತ್ತು ಗುತ್ತಿಗೆದಾರರಿಗೆ ಹಣ ಪಾವತಿ ಹೇಗೆ ಸಾದ್ಯವಾಯಿತು ?

ಸರಕಾರದ ಅಧೀನ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಯವರ ಆದೇಶ ಇದ್ದರೂ, ಪಾರ್ಕಿನಲ್ಲಿ ಕಾಮಗಾರಿ ನಡೆಯಲಿದೆ ಹಾಗಾಗಿ ಭೇಟಿಯನ್ನು ನಿರ್ಭಂದಿಸಿದ್ದೇವೆ ಎಂದು ತಹಶೀಲ್ದಾರರು ಪತ್ರಿಕಾ ಹೇಳಿಕೆಯನ್ನು ನೀಡಿ ಮತ್ತೆ ಅವರೆ ಗ್ರಾಂ.ಪಂ ಪಿಡಿಓ ಗೆ ಅದೇಶ ಹೊರಡಿಸಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಲ್ಲವೇ?

ಪರಶುರಾಮ ಥೀಂ ಪಾರ್ಕ್ ಹಿಂದುಗಳ ಧಾರ್ಮಿಕ ಭಾವನೆಯ ಪ್ರತಿಬಿಂಬ ಇಂತಹ ಸ್ಥಳದಲ್ಲಿ ಇಷ್ಟು ದೊಡ್ಡ ಗೊಂದಲ ಸೃಷ್ಟಿಯಾಗಿರುವುದು ಪರಶುರಾಮನಿಗೆ ಮಾಡಿದ ಅವಮಾನವಲ್ಲವೆ? ಮುಂದೆ ಅವರ ಹೆಸರಿನಲ್ಲಿ ಸಂಘರ್ಷದ ದಿನಗಳಿಗಾಗಿ ಎದುರು ನೋಡುತ್ತಿದ್ದಾರೆಯೇ? ಗೋಮಾಳ ಜಮೀನು ಆಗಿರುದ್ದರಿಂದ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಅರಣ್ಯ ಇಲಾಖೆಯ ಮುಂದಿನ ನಡೆ ಏನಿರಬಹುದು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ?

ಪರಶುರಾಮ ಥೀಂ-ಪಾರ್ಕ್ ನಿರ್ಮಾಣಕ್ಕೆ ನಮ್ಮ ವಿರೋಧವಾಗಲಿ, ಆಕ್ಷೇಪವಾಗಲಿ ಇಲ್ಲ. ಆದರೆ ಮುಚ್ಚಿಟ್ಟಿರುವ ಸತ್ಯವನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ ಅದನ್ನು ಮಾಡಿದ್ದೇವೆ. ಶಾಸಕರು ಕೂಡ ಈ ಬಗ್ಗೆ ಸತ್ಯಾಸತ್ಯತೆಯನ್ನು ಜನತೆಗೆ ತಿಳಿಸುವಂತೆ ಆಗ್ರಹಿಸುತೇನೆ ಎಂದು ಶುಭದರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಅಜಿತ್ ಹೆಗ್ಡೆ, ಕಾರ್ಯದರ್ಶಿ ವಿವೇಕಾನಂದ ಶೆಣೈ ಉಪಸ್ಥಿತರಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News