ಉಡುಪಿ/ನವದೆಹಲಿ (ಆಗಸ್ಟ್ 08) : ಉಡುಪಿ ಶೈಲಿಯ ಆಹಾರ ಎಷ್ಟು ರುಚಿ ಅಂತ ಈಗ ದಿಲ್ಲಿಯವರೆಗೂ ಗೊತ್ತಾಗಿದೆ. ಹೌದು.. ಉಡುಪಿಯ ಸಾಂಪ್ರದಾಯಿಕ ಆಹಾರ ದೇಶದ ಶಕ್ತಿ ಕೇಂದ್ರ ಸಂಸತ್ತಿನಲ್ಲಿ ಘಮಿ ಘಮಿಸಿವೆ.
ಆಗಸ್ಟ್ 03ರಂದು ಸಂಸತ್ ಭವನದ ಒಳಾಂಗಣದಲ್ಲಿ ನಡೆದ ಎನ್ಡಿಎ ಸಂಸದರ ಸಭೆಯ ನಂತರ ಏರ್ಪಡಿಸಲಾಗಿದ್ದ ಭೋಜನಕೂಟದಲ್ಲಿ ಉಡುಪಿ ಖಾದ್ಯಗಳನ್ನು ತಯಾರಿಸಲಾಗಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಸವಿದಿದ್ದಾರೆ.
ಉಡುಪಿ ಸಾರು, ಪತ್ರೊಡೆ, ಸುಕುರುಂಡೆ, ಹಲಸಿನ ಹಣ್ಣಿನ ಗಟ್ಟಿ, ತಿಮರೆ ಚಟ್ನಿ ಮೊದಲಾದ ಆಹಾರವನ್ನು ತಯಾರಿಸಲಾಗಿದ್ದು, ಅದನ್ನು ಮೋದಿ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಎನ್ಡಿಎ ಸಂಸದರು ರುಚಿ ನೋಡಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡಿನ ಕೆಲವು ಖಾದ್ಯಗಳ ಭೋಜವನ್ನು ಸವಿದಿರುವ ಬಗ್ಗೆ ಮೋದಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು.
ಉಡುಪಿಯ ಬುಡ್ನಾರು ಸುಬ್ರಹ್ಮಣ್ಯ ಆಚಾರ್ಯರು ದೆಹಲಿಗೆ ತೆರಳಿ ಉಡುಪಿ ಅಡುಗೆಯನ್ನು ಸಿದ್ಧಪಡಿಸಿದ್ದರು. ಸುಬ್ರಹ್ಮಣ್ಯರ ಜೊತೆ ಸಹಾಯಕರಾಗಿ ರಾಜಶೇಖರ್ ತೆರಳಿದ್ದರು. ಇನ್ನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ನಿತಿನ್ ಗಡ್ಕರಿ, ಜೆ.ಪಿ. ನಡ್ಡಾ, ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಸುಬ್ರಹ್ಮಣ್ಯರ ಅಡುಗೆಯ ರುಚಿ ಪ್ರಶಂಸಿದ್ದಾರೆ.