Tuesday, September 10, 2024
Homeಸುದ್ದಿಉಡುಪಿ: ಕಾಲೇಜಿನಲ್ಲಿ ವೀಡಿಯೊ ಪ್ರಕರಣ; ವಿಶೇಷ ತನಿಖಾ ದಳ ರಚನೆಗೆ ಹಿಂದೂ ಜಾಗರಣ ವೇದಿಕೆ ಆಗ್ರಹ

ಉಡುಪಿ: ಕಾಲೇಜಿನಲ್ಲಿ ವೀಡಿಯೊ ಪ್ರಕರಣ; ವಿಶೇಷ ತನಿಖಾ ದಳ ರಚನೆಗೆ ಹಿಂದೂ ಜಾಗರಣ ವೇದಿಕೆ ಆಗ್ರಹ

ಉಡುಪಿ, ಜು.27: ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ವೀಡಿಯೊ ಚಿತ್ರೀಕರಣ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ ರಚಿಸುವಂತೆ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ ಶೆಟ್ಟಿ, ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವೀಡಿಯೊಗಳನ್ನು ಚಿತ್ರೀಕರಿಸಿ ಆ ಮೂಲಕ ಲವ್ ಜಿಹಾದ್ ಬಲೆಗೆ ಕೆಡಹುವ ಯತ್ನ ನಡೆದಿದ್ದು, ಲವ್ ಜಿಹಾದಿಗಳು ತಮ್ಮ ಕಾರ್ಯಸಾಧನೆಗೆ ಎಂಥಾ ಹೀನ ಕೃತ್ಯಕ್ಕೂ ಇಳಿಯಬಲ್ಲರು ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎಂದರು.

ಪ್ರಭಾವಿಗಳ ಕೈವಾಡ ಈಚೆಗಷ್ಟೇ ಈ ಘಟನೆ ಬೆಳಕಿಗೆ ಬಂದಿದ್ದರೂ ಇದು ಅನೇಕ ತಿಂಗಳಿಂದ ನಿಗೂಢವಾಗಿ ನಡೆಯುತ್ತಿದೆ ಎಂಬ ಆರೋಪ ಆ ಕಾಲೇಜಿನ ವಿದ್ಯಾರ್ಥಿನಿಯರಿಂದ ಕೇಳಿಬರುತ್ತಿದೆ. ಹಿಂದೂ ವಿದ್ಯಾರ್ಥಿನಿಯರ ಖಾಸಗಿ ಕ್ಷಣಗಳನ್ನು ಗುಪ್ತವಾಗಿ ಸೆರೆಹಿಡಿದು ಈ ಮುಸ್ಲಿಂ ವಿದ್ಯಾರ್ಥಿನಿಯರೇ ತಮ್ಮ ಸಮುದಾಯದ ಯುವಕರಿಗೆ ನೀಡಿ ಬ್ಲ್ಯಾಕ್ ಮೇಲ್ ಮಾಡಿಸುವುದು ಈ ಸಂಚಿನ ಉದ್ದೇಶ ಎಂದು ಶ್ರೀಕಾಂತ ಶೆಟ್ಟಿ ಆರೋಪಿಸಿದರು.

ಶೌಚಾಲಯದಲ್ಲಿ ವೀಡಿಯೊ ಚಿತ್ರೀಕರಿಸಿರುವುದನ್ನು ಸ್ವತಃ ಮೂವರು ವಿದ್ಯಾರ್ಥಿನಿಯರೇ ಒಪ್ಪಿಕೊಂಡಿದ್ದು, ಮಾತ್ರವಲ್ಲದೇ ಆ ಒಪ್ಪಿಗೆ ಪತ್ರದಲ್ಲಿ ಇನ್ನೂ ಕೆಲವು ಯುವತಿಯರ ವೀಡಿಯೊ ಚಿತ್ರೀಕರಣ ಮಾಡಿರುವುದನ್ನು ಕೂಡಾ ಒಪ್ಪಿಕೊಂಡಿದ್ದಾರೆ.

ನೂರಾರು ವಿದ್ಯಾರ್ಥಿನಿಯರ ಭವಿಷ್ಯದ ಮೇಲೆ ತೂಗುಗತ್ತಿಯಾಗಿರುವ ಈ ಗಂಭೀರ ಪ್ರಕರಣದ ಬಗ್ಗೆ ತೀವ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಘಟನೆ ನಡೆದೇ ಇಲ್ಲ ಎಂಬಂತೆ ಬಿಂಬಿಸಿರುವುದರ ಹಿಂದೆ ಸರ್ಕಾರ ಅಥವಾ ಪ್ರಭಾವಿ ಶಕ್ತಿಗಳ ಕೈವಾಡ ಇದೆ ಎಂಬ ಸಂದೇಹ ಮೂಡುತ್ತಿದೆ ಎಂದರು.

ಎಸ್.ಪಿ. ಉತ್ತರ ನೀಡಲಿ ಘಟನೆ ಬೆಳಕಿಗೆ ಬಂದ ತಕ್ಷಣ ಸಂತ್ರಸ್ತೆಗೆ ಬೆಂಬಲ ನೀಡಿ ದೂರು ದಾಖಲಿಸಬೇಕಾದ ಪೊಲೀಸರು ಆಕೆಗೆ ಮಾನಸಿಕ ಒತ್ತಡ ಹೇರಿ ಆಕೆ ಪ್ರಕರಣದಿಂದ ದೂರವುಳಿಯುವಂತೆ ಮಾಡಿದ್ದಾರೆ. ತಪ್ಪಿತಸ್ಥ ವಿದ್ಯಾರ್ಥಿನಿಯರ ವಿರುದ್ಧ ಎಫ್.ಐಆರ್ ದಾಖಲಿಸದೇ ಅವರ ಖಾಸಗಿ ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಸ್ಥೆಗೆ ಬರೆದುಕೊಟ್ಟ ತಪ್ಪೊಪ್ಪಿಗೆ ಪತ್ರದಲ್ಲಿ ವೀಡಿಯೊ ಡಿಲೀಟ್ ಮಾಡಿರುವುದಾಗಿ ವಿದ್ಯಾರ್ಥಿನಿಯರು ತಿಳಿಸಿದ್ದರೂ ವೀಡಿಯೊ ಚಿತ್ರೀಕರಣ ನಡೆದೇ ಇಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆಂದರೆ ಏನರ್ಥ ಎಂದು ಪ್ರಶ್ನಿಸಿದ ಶ್ರೀಕಾಂತ ಶೆಟ್ಟಿ, ಅವುಗಳಿಗೆಲ್ಲ ಎಸ್.ಪಿಯವರೇ ಉತ್ತರ ನೀಡಬೇಕು ಎಂದು ಸವಾಲೆಸೆದರು.

ಆರಂಭದಲ್ಲಿ ಎಫ್.ಐಆರ್ ದಾಖಲಿಸಲು ಸಾಕ್ಷ್ಯಾಧಾರಗಳಿಲ್ಲ ಎಂದ ಪೊಲೀಸರು ವಿವಾದ ಭುಗಿಲೆದ್ದ ಬಳಿಕ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡದ್ದೇಕೆ? ಟ್ವಿಟ್ ಮಾಡಿದ ಹಿಂದೂ ಕಾರ್ಯಕರ್ತೆಯೊಬ್ಬರ ಮನೆಗೆ ರಾತ್ರಿ ವೇಳೆ ತೆರಳಿ ಬೆದರಿಗೆ ಹಾಕಿದ ಪೊಲೀಸರು, ತಪ್ಪಿತಸ್ಥ ವಿದ್ಯಾರ್ಥಿನಿಯರ ಮನೆಗೆ ವಿಚಾರಣೆಗೆ ತೆರಳಿಲ್ಲವೇಕೆ? ಎಂದು ನೇರವಾಗಿ ಎಸ್.ಪಿಯವರನ್ನು ಪ್ರಶ್ನಿಸಿರುವ ಶ್ರೀಕಾಂತ ಶೆಟ್ಟಿ, ಪ್ರಕರಣವನ್ನು ಮುಚ್ಚಿಹಾಕುವ ತವಕದಲ್ಲಿರುವ ಪೊಲೀಸರು, ಆ ಸಂಸ್ಥೆಯ ಹಿಂದೂ ವಿದ್ಯಾರ್ಥಿನಿಯ ಖಾಸಗಿ ವೀಡಿಯೊಗಳು ಚಿತ್ರೀಕರಣಗೊಂಡಿಲ್ಲ ಮತ್ತು ಆ ವಿದ್ಯಾರ್ಥಿನಿಗೆ ಸಮಸ್ಯೆ ಆಗುವುದಿಲ್ಲ ಎಂದು ಆಕೆಯ ಭವಿಷ್ಯದ ಭದ್ರತೆ ಬಗ್ಗೆ ಲಿಖಿತವಾಗಿ ಖಾತ್ರಿಪಡಿಸುವಿರಾ ಎಂದು ಪ್ರಶ್ನಿಸಿದರು.

ಘಟನೆ ನಡೆದಿರುವ ಸಿಬಂದಿ ಖಾದರ್ ಎಂಬವರ ಬಗ್ಗೆ ಅನೇಕ ಸಂದೇಹಗಳಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಎಂದು ಶ್ರೀಕಾಂತ ಶೆಟ್ಟಿ ಆಗ್ರಹಿಸಿದರು.

ಖುಷ್ಬೂ ಲಿಖಿತ ಸ್ಕ್ರಿಪ್ಟ್ ಇದೀಗ ವಿಚಾರಣೆಗಾಗಿ ಆಗಮಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಖುಷ್ಬೂ ಓರ್ವ ನಟಿ. ಆಕೆ ಲಿಖಿತ ಸ್ಕ್ರಿಪ್ಟ್ ಓದುವವರು. ಆ ರೀತಿಯಲ್ಲಿಯೇ ಹೇಳಿಕೆ ನೀಡಿದ್ದಾರೆ. ಆದರೆ, ಆಕೆಗೆ ಸ್ಕ್ರಿಪ್ಟ್ ಬರೆದುಕೊಟ್ಟವರು ಯಾರು ಎಂದು ಬಹಿರಂಗವಾಗಬೇಕು ಎಂದ ಶ್ರೀಕಾಂತ ಶೆಟ್ಟಿ, ಘಟನೆ ಬಗ್ಗೆ ಬಿಜೆಪಿ ವಿರೋಧಿಸಲಿ ಅಥವಾ ವಿರೋಧಿಸದಿರಲಿ, ಹಿಂದೂ ಜಾಗರಣ ವೇದಿಕೆ ಮಾತ್ರ ತೀವ್ರ ವಿರೋಧಿಸಿ, ಪ್ರಕರಣಕ್ಕೊಂದು ಇತಿಶ್ರೀ ಹಾಡಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಹಿಂಜಾವೇ ಪ್ರಾಂತ ಸಹಸಂಚಾಲಕ ಪ್ರಕಾಶ ಕುಕ್ಕೆಹಳ್ಳಿ, ಜಿಲ್ಲಾ ಸಂಚಾಲಕ ಶಂಕರ್, ಸಹಸಂಚಾಲಕರಾದ ನವೀನ ಗಂಗೊಳ್ಳಿ, ರಿಕೇಶ್ ಕಡೆಕಾರ್, ಗುರುಪ್ರಸಾದ ಸೂಡ ಇದ್ದರು

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News