ಹಠಾತ್ ಪ್ರವಾಹ ಮುನ್ಸೂಚನೆ: ಎಚ್ಚರಿಕೆ ವಹಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

ಬೆಂಗಳೂರು: ಹವಾಮಾನ ಇಲಾಖೆಯು ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್) ಮುನ್ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತ ಎಚ್ಚರಿಕೆಯಿಂದಿರಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಈ ಕುರಿತು ಉಡುಪಿಯ ಜಿಲ್ಲಾಧಿಕಾರಿ ಹಾಗೂ ಇತರ ಹಿರಿಯ ಅಧಿಕಾರಿಗಳಿಗೆ ಸಚಿವರು ಸಂದೇಶ ರವಾನಿಸಿದ್ದಾರೆ.

ಉಡುಪಿ, ಉತ್ತರ ಕನ್ನಡ, ಮಹಾರಾಷ್ಟ್ರದ ಸಿಂಧುದುರ್ಗ, ರತ್ನಾಗಿರಿ, ಉತ್ತರ ಹಾಗೂ ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್) ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲಾಡಳಿತ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರೂ ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಎಚ್ಚರಿಕೆ ನೀಡಬೇಕು. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.

ಇಂತಹ ಸಂದರ್ಭಗಳಲ್ಲಿ ಗುಡ್ಡ ಕುಸಿಯುವ ಸಂಭವ ಇರುತ್ತದೆ. ಆದ್ದರಿಂದ ಪ್ರವಾಸಿಗರು ಮತ್ತು ಗುಡ್ಡದ ಮೇಲೆ ವಾಸಿಸುವ ಗ್ರಾಮಸ್ಥರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಜಲಪಾತ ವೀಕ್ಷಣೆ ಅಥವಾ ಚಾರಣ ಕೈಗೊಳ್ಳಬಾರದು. ಜಿಲ್ಲಾಡಳಿತ ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಗಾ ಇಡಬೇಕು ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.

Scroll to Top