ದೇವಾಲಯಕ್ಕೆಂದು ಬಂದು ಜಲಪಾತಕ್ಕೆ ಬಿದ್ದ ಯುವಕ: ಪತ್ತೆಯಾಗದ ಶರತ್ ಮೃತದೇಹ, ಕಾರ್ಯಚರಣೆ ಸ್ಥಗಿತ

ಉಡುಪಿ/ಶಿವಮೊಗ್ಗ : ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಉಡುಪಿಯ ಅರಶಿನಗುಂಡಿ ಜಲಪಾತಕ್ಕೆ ಬಿದಿದ್ದ ಭದ್ರಾವತಿಯ ಯುವಕ ಶರತ್ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ.

ಭದ್ರಾವತಿ ಮೂಲದ ಶರತ್ ಸ್ನೇಹಿತರೊಂದಿಗೆ ನಿನ್ನೆ (ಜುಲೈ 24) ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತ ನೋಡಲು ಬಂದಿದ್ದು, ಈ ವೇಳೆ ಬಂಡೆಗಳ ಮೇಲೆ ನಿಂತು ರೀಲ್ಸ್ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ.

ಸ್ಥಳಕ್ಕೆ ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಯುವಕ ಪತ್ತೆಗೆ ಕಾರ್ಚರಣೆ ನಡೆಸಿದ್ದಾರೆ. ಆದ್ರೆ, ಇದುವರೆಗೂ ಸಹ ಪತ್ತೆಯಾಗಿಲ್ಲ. ಕಾರ್ಯಾಚರಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಳುಗು ತಜ್ಞರು, ಪೊಲೀಸರು ವಾಪಸ್ ಆಗಿದ್ದಾರೆ.

ಕುಟುಂಬಸ್ಥರು ಮತ್ತು ಆತನ ಸ್ನೇಹಿತರು ಪ್ರತಿಕ್ರಿಯಿಸಿದ್ದು, ಎಷ್ಟು ಹುಡುಕಿದರು ಶರತ್ ಪತ್ತೆಯಾಗಲಿಲ್ಲ. ಸುಮಾರು 8 ಗಂಟೆಗಳ ಕಾರ್ಯಚರಣೆ ಮಾಡಿದರು ಸಿಕ್ಕಿಲ್ಲ. ಅರಿಶಿನಗುಂಡಿ ಜಲಪಾತಕ್ಕೆ ಹೋಗುವ ಮೊದಲು ಸಿಗುವ ತೊರೆಯನ್ನು ದಾಟಲು ಸಾಧ್ಯವಾಗಲಿಲ್ಲ. ಇದರಿಂದ ಕಾರ್ಯಚರಣೆ ನಡೆಸಲು ಸಾಧ್ಯವಾಗದೆ ವಾಪಸ್ಸು ಬಂದಿದ್ದೇವೆ ಎಂದಿದ್ದಾರೆ.

ಕೊಲ್ಲೂರು ದೇವಾಲಯ ಮತ್ತು ಹೊಸಂಗಡಿಗೆ ಹೋಗುತ್ತೆವೆ ಎಂದು ಮನೆಯಲ್ಲಿ ಹೇಳಿ ಬಂದಿದ್ದ. ಆದ್ರೆ, ಅರಿಶಿನಗುಂಡಿ ಜಲಪಾತಕ್ಕೆ ಹೋಗುತ್ತವೆ ಎಂದು ಹೇಳಿರಲಿಲ್ಲವಂತೆ. ಕೃಷಿ ಕೆಲಸ ಮಾಡಿಕೊಂಡಿದ್ದ ಶರತ್, ಈಗ ಕೃಷಿ ಕೆಲಸ ಕಡಿಮೆ ಇದ್ದುದರಿಂದ ದೇವಾಲಯಕ್ಕೆ ಹೋಗಿ ಬರುವುದಾಗಿ ಹೇಳಿದ್ದ. ಆದ್ರೆ, ದೇವಾಲಯಕ್ಕೆಂದು ಬಂದವರು ಈ ಜಲಪಾತಕ್ಕೆ ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

Scroll to Top