Saturday, July 27, 2024
Homeಸುದ್ದಿಕರಾವಳಿಮಣಿಪುರ ಜನತೆ ಶಾಂತಿ ಕಾಪಾಡಲು ಪೇಜಾವರ ಶ್ರೀ ಮನವಿ

ಮಣಿಪುರ ಜನತೆ ಶಾಂತಿ ಕಾಪಾಡಲು ಪೇಜಾವರ ಶ್ರೀ ಮನವಿ

ಉಡುಪಿ : ದೇಶದ ಅವಿಭಾಜ್ಯ ಅಂಗವಾಗಿರುವ ಮಣಿಪುರ ರಾಜ್ಯದಲ್ಲಿ ಇತ್ತೀಚಿನ‌ ದಿನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಬೆಳವಣಿಗೆಗಳಿಂದ ಮನಸ್ಸಿಗೆ ತುಂಬ ವಿಷಾದವಾಗಿದೆ ಎಂದು ಶ್ರೀ ಪೇಜಾವರ ಮಠ ಉಡುಪಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಗತ್ತಿಗೇ ಅಹಿಂಸೆ ಶಾಂತಿಯ ಮಂತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸಿದ ಭಾರತದ ಯಾವುದೇ ಭಾಗದಲ್ಲಿ ಇಂಥ ವಿಲಕ್ಷಣ ಬೆಳವಣಿಗೆಗಳು ನಡೆಯಬಾರದು.

ಅದು ನಮಗೆ ಬದುಕು ಕೊಟ್ಟ ನೆಲಕ್ಕೆ ನಾವು ಮಾಡುವ ಅವಮಾನವಾಗುತ್ತದೆ. ಪ್ರಪಂಚದ ಸಮಗ್ರ ಇತಿಹಾಸವನ್ನು ಗಮನಿಸಿದರೆ ಹಿಂಸೆ ಆಕ್ರಮಣ ಅತ್ಯಾಚಾರಗಳಿಂದ ಯಾರೂ ಯಾವ ದೇಶವೂ ಏನನ್ನೂ ಸಾಧಿಸಿಲ್ಲ.

ನಮ್ಮ ರಾಮಾಯಣ ಮಹಾಭಾರತಗಳೂ ಅದನ್ನು ಸಾರಿ ಹೇಳಿವೆ. ಮಣಿಪುರದ ನೆಲದಲ್ಲಿ ಅನಾದಿಕಾಲದಿಂದ ಬದುಕುತ್ತಿರುವ ಎರಡು ಸಮುದಾಯಗಳ ನಡುವೆ ಯಾವುದೋ ಅಭಿಪ್ರಾಯ ಬೇಧಗಳಿಂದ ಹುಟ್ಟಿಕೊಂಡ ಈ ಗಲಭೆ ದಂಗೆಗಳಿಂದ ಏನನ್ನು ಸಾಧಿಸಲು ಹೊರಟಿದ್ದೇವೆ ? ನಮ್ಮ ಮುಂದಿನ ಪೀಳಿಗೆಗೆ ಯಾವ ಸಂದೇಶವನ್ನು ಕೊಡಲು ಹೊರಟಿದ್ದೇವೆ ಎನ್ನುವುದನ್ನು ಯೋಚಿಸಿದ್ದೀರಾ? ಭಗವದ್ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ಹೇಳಿದಂತೆ ಆಕ್ರೋಶದ ಕೈಗೆ ಬುದ್ಧಿಯನ್ನು ಕೊಟ್ಟರೆ ಬುದ್ಧಿನಾಶವಾಗುತ್ತದೆ ಮತ್ತು ಬುದ್ಧಿನಾಶವು ನಮ್ಮೆಲ್ಲರ ನಾಶಕ್ಕೆ ಕಾರಣವಾಗುತ್ತದೆ ಎಂದು ಸಾರಿರುವುದನ್ನು ಗಮನಿಸಬೇಕು .

ಆದ್ದರಿಂದ ಇಂಥ ವಿನಾಶಕಾರಿ ಬೆಳವಣಿಗೆಗಳು ಅವಶ್ಯವೇ ಎನ್ನುವುದನ್ನು ಗಲಭೆಯಲ್ಲಿ ತೊಡಗಿಕೊಂಡ ಸಮುದಾಯಗಳ ಮುಖಂಡರು ಅತ್ಯಂತ ತಾಳ್ಮೆ ಸಹನೆಯಿಂದ ವಿವೇಚಿಸಬೇಕು .

ಮಣಿಪುರದ ಜನತೆ ತಕ್ಷಣ ಹಿಂಸೆಯ ಮಾರ್ಗವನ್ನು ಬಿಟ್ಟು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಸಮಾಲೋಚಿಸಿ ಮಣಿಪುರದ ಮತ್ತು ಭಾರತದ ಭವ್ಯ ಭವಿಷ್ಯದ ದೃಷ್ಟಿಯಿಂದ ಕೂಡಲೇ ಪರಿಹರಿಸಿಕೊಂಡು ಇಡೀ ದೇಶಕ್ಕೇ ಒಂದು ಒಳ್ಳೆಯ ಸಂದೇಶವನ್ನು ಕೊಡಬೇಕು .

ಮಣಿಪುರ ರಾಜ್ಯದ ಶಾಂತಿ ಸುಭಿಕ್ಷೆ ಪ್ರಗತಿಗೆ ಮಾರಕವಾಗಿರುವ ಇಂಥ ಅಹಿತಕರ ಬೆಳವಣಿಗೆಗಳಿಗೆ ಆಸ್ಪದ ಕೊಡುವುದಿಲ್ಲ ಎಂದು ಎಲ್ಲರೂ ಒಟ್ಟಾಗಿ ಶಪಥಮಾಡಬೇಕು.

ನಮ್ಮ ಒಗ್ಗಟ್ಟು ನಮ್ಮ ಶಕ್ತಿ, ನಮ್ಮ ವಿಘಟನೆ ಮತ್ತೊಬ್ಬನ ಶಕ್ತಿ ಯಾಗುತ್ತದೆ ಎನ್ನುವುದನ್ನು ಅರಿತು ಒಗ್ಗಟ್ಟಿನಿಂದ ಮಣಿಪುರ ರಾಜ್ಯದ ಒಳಿತಿಗಾಗಿ ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕುವಂತಾಗಲಿ ಎಂದು ಆಶಿಸುತ್ತೇವೆ .

ಅವಶ್ಯವಿದ್ದರೆ ಮಣಿಪುರದ ಒಳಿತಿಗಾಗಿ ಯಾವುದೇ ಸಂಧಾನ ಮಾತುಕತೆಗಳಿಗೂ ಮಧ್ಯಸ್ಥಿಕೆ ವಹಿಸಲು ಸಿದ್ಧರಿದ್ದೇವೆ ಎನ್ನುವುದನ್ನೂ ತಿಳಿಸಲು ಬಯಸುತ್ತೇವೆ ಎಂದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News