Saturday, July 27, 2024
Homeಸುದ್ದಿಅತೀ ದೊಡ್ಡ ಗ್ಯಾರಂಟಿ ಗೃಹಲಕ್ಷ್ಮೀ ಜಾರಿಯ ಸವಾಲು; ಯಶಸ್ವಿಯಾಗಿ ನಿಭಾಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಅತೀ ದೊಡ್ಡ ಗ್ಯಾರಂಟಿ ಗೃಹಲಕ್ಷ್ಮೀ ಜಾರಿಯ ಸವಾಲು; ಯಶಸ್ವಿಯಾಗಿ ನಿಭಾಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು, ಜು.18: ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಪ್ರಸ್ತುತ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನೇತೃತ್ವದ ಸರಕಾರ ತೊಡಗಿಕೊಂಡಿದೆ. ಮೂರನ್ನು ಈಗಾಗಲೆ ಜಾರಿಗೊಳಿಸಲಾಗಿದ್ದರೆ, ಇನ್ನೆರಡು ಯೋಜನೆ ಜಾರಿಯ ಹಂತದಲ್ಲಿದೆ.

5 ಗ್ಯಾರಂಟಿಗಳಲ್ಲಿ ಅತ್ಯಂತ ದೊಡ್ಡದಾದ ಗೃಹಲಕ್ಷ್ಮೀ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಹೊಣೆ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿನ ಏಕೈಕ ಮಹಿಳಾ ಮಂತ್ರಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಬಂದಿತು. ಹಾಗಾಗಿ, ತಾವು ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಇನ್ನಿತರ ಚಟುವಟಿಕೆಗಳ ಜೊತೆಗೆ ಗೃಹಲಕ್ಷ್ಮೀ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ಪಣತೊಟ್ಟು ಅವರು ಕೆಲಸ ಆರಂಭಿಸಿದರು.

ಸುಮಾರು 30 ಸಾವಿರ ಕೋಟಿ ರೂ.ಗಳ ಈ ಯೋಜನೆಯನ್ನು ಜಾರಿಗೊಳಿಸುವುದು ಸುಲಭವಾಗಿರಲಿಲ್ಲ. ಹಣಕಾಸಿನ ಹೊಂದಾಣಿಕೆ ಹೊಣೆ ಹಣಕಾಸು ಖಾತೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿಗಳ ಮೇಲಿದ್ದರೂ ಯೋಜನೆ ಜಾರಿಗೆ ಪ್ರತಿ ಹಂತದಲ್ಲೂ ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕಿತ್ತು. ಮೊಟ್ಟ ಮೊದಲನೆಯದಾಗಿ ಯೋಜನೆಗಾಗಿ ಅರ್ಜಿ ಸಲ್ಲಿಸಲು ತಾಂತ್ರಿಕ ಸವಾಲು ಮುಂದಿತ್ತು. ಯಾವುದೇ ಗೊಂದಲ ನುಸುಳದಂತೆ, ಫಲಾನುಭವಿಗಳಿಗೆ ಹೊರೆಯಾಗದಂತೆ ವ್ಯವಸ್ಥಿತವಾಗಿ ಅರ್ಜಿಗಳ ನೊಂದಣಿಗೆ ವ್ಯವಸ್ಥೆ ಮಾಡಬೇಕಿತ್ತು. ಸಚಿವರಾಗಿ ಆರಂಭಿಕ ಒತ್ತಡಗಳ ಜೊತೆಗೆ ಸಮಯ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು. ಇಡೀ ಯೋಜನೆ ಜಾರಿಗೆ ಅಧಿಕಾರಿಗಳ ಸಹಕಾರ ಮುಖ್ಯವಾಗಿತ್ತು.

ಮೊದಲ ದಿನದಿಂದಲೇ, ಅಧಿಕಾರಿಗಳು ಹಾಗೂ ತಾಂತ್ರಿಕ ಪರಿಣಿತರ ಜೊತೆ ನಿರಂತರವಾಗಿ ಸಭೆಗಳನ್ನು ನಡೆಸುವ ಮೂಲಕ ಇದಕ್ಕಾಗಿಯೇ ಪ್ರತ್ಯೇಕ ಆ್ಯಪ್ ಸಿದ್ದಪಡಿಸುವ ಕೆಲಸವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರಂಭಿಸಿದರು. ಸಣ್ಣ ಪುಟ್ಟ ಸಮಸ್ಯೆಗಳೂ ಎದುರಾಗದಂತೆ, ನಕಲಿಗಳಿಗೆ ಅವಕಾಶವಾಗದಂತೆ ಈ ಆ್ಯಪ್ ತಯಾರಿಸುವ ಕೆಲಸವನ್ನು ರೂಪಿಸಿದರು. ಆಗಾಗ ವಿರೋಧ ಪಕ್ಷಗಳಿಂದ ಟೀಕೆಗಳು ಬಂದರೂ ಅವಕ್ಕೆಲ್ಲ ತಾಳ್ಮೆಯಿಂದಲೇ ಪ್ರತಿಕ್ರಿಯಿಸುತ್ತ, ಅರ್ಜುನನ ಗುರಿ ಪಕ್ಷಿಯ ಕಣ್ಣಿನ ಮೇಲೆ ಎನ್ನುವಂತೆ, ರಾಜ್ಯದ 1.28 ಕೋಟಿ ಮಹಿಳೆಯರಿಗೆ ಸಹಾಯ ಮಾಡುವ ಈ ಯೋಜನೆಯ ಸಮರ್ಪಕ ಜಾರಿಯೊಂದೇ ತಮ್ಮ ಮುಂದಿನ ಗುರಿ ಎಂದು ಮುನ್ನಡೆದರು.

ಲಕ್ಷ್ಮೀ ಹೆಬ್ಬಾಳಕರ್ ಮೂಲತಃ ಗ್ರಾಮೀಣ ಪ್ರದೇಶದಿಂದ ಬಂದ ಹೆಣ್ಣುಮಗಳು. ಶೈಕ್ಷಣಿಕವಾಗಿಯಾಗಲಿ, ಆರ್ಥಿಕವಾಗಿಯಾಗಲಿ ಪ್ರಬಲವಾದ ಹಿನ್ನೆಲೆ ಇರಲಿಲ್ಲ. ಸ್ವ ಪ್ರಯತ್ನದಿಂದಲೇ ಹಂತ ಬಂತವಾಗಿ ಈ ಮಟ್ಟಕ್ಕೆ ಬೆಳೆದು ನಿಂತವರು. ಆದರೆ ಮೊದಲಿನಿಂದಲೂ ತಮಗೆ ವಹಿಸಿದ ಜವಾಬ್ದಾರಿಯನ್ನು ಎಷ್ಟೇ ಕಷ್ಟವಾದರೂ ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಗುಣ ಅವರದ್ದು. ಎಷ್ಟೇ ಸವಾಲು, ಅವಮಾನ, ಅಡ್ಡಿ, ಆತಂಕಗಳು ಎದುರಾದರೂ ಅತ್ಯಂತ ಜಾಣ್ಮೆ ಮತ್ತು ತಾಳ್ಮೆಯಿಂದ ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ. ಅದು ಪ್ರಸ್ತುತ ಗೃಹಲಕ್ಷ್ಮೀ ಯೋಜನೆ ಜಾರಿಯಲ್ಲೂ ಪ್ರತಿಬಿಂಬಿತವಾಗುತ್ತಿದೆ.

30 ಸಾವಿರ ಕೋಟಿ ರೂ. ಮೊತ್ತದ ಗೃಹ ಲಕ್ಷ್ಮೀ ಯೋಜನೆ ಜಾರಿಯ ಇಷ್ಟು ದೊಡ್ಡ ಹೊಣೆ ತಮ್ಮ ಹೆಗಲಿಗೆ ಬರಬಹುದೆಂದು ಲಕ್ಷ್ಮೀ ಹೆಬ್ಬಾಳಕರ್ ಎಂದೂ ಯೋಚಿಸಿರಲಿಕ್ಕಿಲ್ಲ. ಆದರೆ ಆ ಜವಾಬ್ದಾರಿ ಬಂದಾಗ ಹಿಂಜರಿಯಲಿಲ್ಲ. ಬದಲಾಗಿ ಹಗಲು, ರಾತ್ರಿ ಕೆಲಸ ಮಾಡಿ ಯೋಜನೆಯನ್ನು ಅರ್ಜಿ ಸ್ವೀಕಾರದ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಮನಸ್ಸು ಮಾಡಿದರೆ ಎಂತಹ ಸವಾಲನ್ನೂ ನಿಭಾಯಿಸಬಹುದು ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಸಿಗಲಿಕ್ಕಿಲ್ಲ.

ಮಧ್ಯವರ್ತಿಗಳು ಮತ್ತು ನಕಲಿಗಳ ಹಾವಳಿಯಿಂದ ಮಹಿಳೆಯರಿಗೆ ಮೋಸವಾಗಬಾರದೆಂದು, ಅವರಿಗೆ ಸಹಾಯ ಮಾಡುವುದಕ್ಕೆಂದೇ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡುವ ವಿನೂತನ ಯೋಜನೆಯನ್ನು ಲಕ್ಷ್ಮೀ ಹೆಬ್ಬಾಳಕರ್ ರೂಪಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ರೂ. ಕೊಡುವ ಯೋಜನೆಗೆ ಅರ್ಜಿ ಪಡೆಯಲು ಸರಕಾರವೇ ಹಣಕೊಟ್ಟು ಪ್ರತಿನಿಧಿಗಳನ್ನು ನೇಮಿಸುವ ಕಲ್ಪನೆ ಇತಿಹಾಸದಲ್ಲೇ ಇದು ಮೊದಲಿರಬೇಕು. ಇದು, ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಮತ್ತು ಫಲಾನುಭವಿ ಮಹಿಳೆಯರ ಬಗೆಗಿನ ಹೆಬ್ಬಾಳಕರ್ ಅವರ ಕಳಕಳಿಗೆ ಸಾಕ್ಷಿಯಾಗಿದೆ.

ಉಡುಪಿ ಜಿಲ್ಲೆಯ ಉಸ್ತುವಾರಿ ಹೊಣೆಯನ್ನು ನಿಭಾಯಿಸುವ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಸಚಿವಸಂಪುಟದ ಎಲ್ಲ ಸಹೋದ್ಯೋಗಿಗಳ ಸಹಕಾರದೊಂದಿಗೆ ಸವಾಲನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿದರು. ಇದೀಗ, ಬುಧವಾರ (ಜುಲೈ 19) ಈ ವಿನೂತನ ಯೋಜನೆಗೆ ಅರ್ಜಿ ಸ್ವೀಕಾರ ಆರಂಭಿಸುವುದರೊಂದಿಗೆ ರಾಜ್ಯದ ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುತ್ತೇನೆನ್ನುವ ತನ್ನ ವಚನವನ್ನು ಮತ್ತೊಮ್ಮೆ ಈಡೇರಿಸುತ್ತಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News