ಬಂಟಕಲ್ಲು: ಪೋಲಿಸ್ ಇಲಾಖಾ ಮಾಹಿತಿ ಸಂವಾದ ಕಾರ್ಯಕ್ರಮ;
ಶಿರ್ವ ನೂತನ ಠಾಣಾಧಿಕಾರಿ ಉಪಸ್ಥಿತಿ


ನಾಗರಿಕ ಸೇವಾ ಸಮಿತಿ ರಿ.ಬಂಟಕಲ್ಲು ಇವರ ಆಶ್ರಯದಲ್ಲಿ ಶಿರ್ವ ಪೋಲಿಸ್ ಆರಕ್ಷರ ಠಾಣೆಯ ಸಹಯೋಗದೊಂದಿಗೆ ಪೋಲಿಸ್ ಇಲಾಖಾ ಮಾಹಿತಿ ಕಾರ್ಯಕ್ರಮ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮವು ಬಂಟಕಲ್ಲು ದೇವಸ್ಥಾನದಲ್ಲಿ ನಡೆಯಿತು.

ಇಲಾಖಾ ಮಾಹಿತಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಶಿರ್ವ ಆರಕ್ಷರ ಠಾಣೆಯ ನೂತನ ಠಾಣಾಧಿಕಾರಿ ಶ್ರೀ ಶಕ್ತೀವೇಲು ರವರು ಇತ್ತೀಚಿಗಿನ ಇಲಾಖೆ ಹೊಸ ವ್ಯವಸ್ಥೆ, ಕಾನೂನುಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕುವ ಕ್ರಮಗಳು, ಸೈಬರ್ ಅಪರಾಧಗಳು, ಸಾಮಾಜಿಕ ಜಾಲತಾಣದ ದುರುಪಯೋಗ, ಮಾದಕ ದ್ರವ್ಯ ಅಪರಾಧಗಳು, ಫೋಕ್ಸೋ ಖಾಯಿದೆ,ರಸ್ತೆ ಸುರಕ್ಷಾ ನಿಯಮಗಳ ಉಲ್ಲಂಘನೆ ಅದರ ದಂಡ, ಶಿಕ್ಷೆ ಖಾಯಿದೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.

ಸಾರ್ವಜನಿಕರು ವ್ಯಕ್ತಪಡಿಸಿದ ಮಾದಕ ದ್ರವ್ಯ ಪಿಡುಗು, ಟಿಪ್ಪರ್ ಗಳ ಅಪರಿಮಿತ ವೇಗ,18 ವರುಷ ಆಗಿರದೆ, ಪರವಾನಿಗೆ ಪಡೆಯದೆ ದ್ವಿಚಕ್ರ ವಾಹನ ಚಾಲನೆ ನಡೆಸುತ್ತಿರುವವರ ಬಗ್ಗೆ ಗಮನಸೆಳೆದಾಗ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸರಕಾರದ ಯೋಜನೆಗಳನ್ನು ಪಡೆಯುವ ಭರದಲ್ಲಿ ಮೋಸಹೋಗದಂತೆ ತಿಳಿಸಿ ಸರಕಾರ ತಿಳಿ ಇರುವ ನಿಗದಿತ ಕೇಂದ್ರಗಳಲ್ಲೆ ಯೋಜನೆಗಳನ್ನು ನೊಂದಾಯಿಸುವಂತೆ ತಿಳಿಸಿದರು.

ಶಾಂತಿ ಸುವ್ಯವಸ್ಥೆ ಹಾಗೂ ಅಪರಾಧ ರಹಿತ ಗ್ರಾಮವಾಗಲು ನಾಗರಿಕರ ಸಹಕಾರ ಅತೀ ಅಗತ್ಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರು ಮಾತನಾಡಿ ನೂತನ ಠಾಣಾಧಿಕಾರಿಯವರಿಗೆ ನಾಗರಿಕರ ಪರವಾಗಿ ಶಾಲು ಹೊದಿಸಿ ಅಭಿನಂದಿಸಿ ಶುಭಹಾರೈಸಿದರು. ಶಿರ್ವ ಪೇಟೆಯ ಪಾರ್ಕಿಂಗ್ ಸಮಸ್ಯೆಗಳು, ನಿಯಮ ಉಲ್ಲಂಘಿಸಿ ವಾಹನ ಚಾಲನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿನಂತಿಸಿ ನಾಗರಿಕ ಸೇವಾ ಸಮಿತಿಯು ಪೋಲಿಸ್ ಇಲಾಖೆ ಸಹಕಾರ ನೀಡಲು ಸಿದ್ದವಿದೆ ಎಂದರು.

ಬಂಟಕಲ್ಲು ದೇವಳದ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ್ ಪ್ರಭು, ನಾಗರಿಕ ಸಮಿತಿಯ ಕಾರ್ಯದರ್ಶಿ ದಿನೇಶ್ ದೇವಾಡಿಗ ವೇದಿಕೆಯಲ್ಲಿ ಉಪಸ್ತಿತರಿದ್ದರು. ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ವೈಲೆಟ್ ಕಸ್ತಲಿನೊ, ಸತೀಶ್ ಬಂಟಕಲ್ಲು ಮತ್ತು ಬಿ.ಸಿ ರೋಡ್ ನ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಗಳು, ಸದಸ್ಯರು, ನಾ ಸೇ ಸಮಿತಿ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ಶಿರ್ವ ಪೋಲಿಸ್ ಠಾಣೆಯ ಎ ಎಸ್ ಐ ಕೃಷ್ಣ ಆಚಾರ್ಯ, ಸಿಬ್ಬಂಧಿ ಧರ್ಮ, ಶಿವರಾಮ್ ಭಾಗವಹಿಸಿದ್ದರು.

Scroll to Top