ರಾಯಚೂರು, ಜು.8: ವಿಚ್ಛೇದನಕ್ಕೆ ಅರ್ಜಿ ಹಾಕಿ ನ್ಯಾಯಾಲಯ ಮೆಟ್ಟಿಲೇರಿದ್ದ ರಾಯಚೂರಿನ 15 ಜೋಡಿಗಳನ್ನು ನ್ಯಾಯಾಧೀಶರು ಸಂಧಾನ ಮಾಡಿ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ.
ರಾಷ್ಟ್ರೀಯ ಲೋಕಾ ಅದಾಲತ್ ಹಿನ್ನೆಲೆಯಲ್ಲಿ ದಂಪತಿಗಳ ನಡುವೆ ಇರುವ ವ್ಯಾಜ್ಯಗಳನ್ನ ರಾಜಿಸಂಧಾನ ಮೂಲಕ ಇತ್ಯರ್ಥ ಪಡಿಸಲು 90 ಪ್ರಕರಣ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ ಡಿವೋರ್ಸ್ ಹಾಗೂ ಜೀವನಾಂಶ ಕೋರಿ ಅರ್ಜಿ ಹಾಕಿದ ಪ್ರಕರಣಗಳು ಹೆಚ್ಚಾಗಿ ಇದ್ದವು. ಇದರಲ್ಲಿ ಸಂಧಾನ ಮೂಲಕ 15 ಜೋಡಿಗಳು ಮತ್ತೆ ಒಂದಾಗಲು ಒಪ್ಪಿದ್ದಾರೆ.

ಮತ್ತೆ ಹೊಸ ಬದುಕನ್ನು ಆರಂಭಿಸುವಂತೆ ಹಾರ ಬದಲಾಯಿಸಿ, ಸಿಹಿ ತಿನಿಸಿ ದಂಪತಿಗಳನ್ನ ಕಳುಹಿಸಿಕೊಡಲಾಗಿದೆ. ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಅವರ ಪ್ರಕರಣಗಳನ್ನು ಮುಕ್ತಾಯ ಮಾಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಆಸ್ತಿ, ಹಣಕಾಸಿನ ವ್ಯಾಜ್ಯಗಳಿಗಿಂತ ಕುಟುಂಬ ವ್ಯಾಜ್ಯಗಳೇ ಹೆಚ್ಚು ಬರುತ್ತಿವೆ. ಹೀಗಾಗಿ ರಾಜಿಸಂಧಾನ ಮೂಲಕ ಬಗೆಹರಿಸಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.