ಮಗುವನ್ನು ಹತ್ಯೆಗೈದು ದೃಶ್ಯಂ ಸಿನಿಮಾ ರೀತಿಯಲ್ಲಿ ಶವ ವಿಲೇವಾರಿ ಮಾಡಿದ ತಾಯಿ

ಮೂರು ದಿನಗಳ ಕಾಲ ಸತತ ಹುಡುಕಾಟ ನಡೆಸಿದರೂ ಸಹಿತ ಮಗುವಿನ ಸುಳಿವು ದೊರೆತಿರಲಿಲ್ಲ. ಈ ಹಿನ್ನೆಲೆ ಪೊಲೀಸರಿಗೆ ಮಗುವಿನ ತಾಯಿಯ ಮೇಲೆ ಅನುಮಾನ ಮೂಡಿದ್ದು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ಬಳಿಕ ಸತ್ಯಾಂಶ ಹೊರಬಿದ್ದಿದೆ. ಸೂರತ್‌ನ ದಿಂಡೋಲಿ ಪ್ರದೇಶದಲ್ಲಿ ಸೈಟ್‌ವೊಂದರ ಕಟ್ಟಡದಲ್ಲಿ ಕೂಲಿಕೆಲಸ ಮಾಡುತ್ತಿದ್ದ ನಯನಾ ಮಾಂಡವಿ ಎಂಬಾಕೆ ತನ್ನ ಪ್ರಿಯಕರನಿಗೋಸ್ಕರ ಆಕೆಯ ಎರಡೂವರೆ ವರ್ಷದ ವೀರ್ ಮಾಂಡವಿ ಎಂಬ ಗಂಡು ಮಗುವನ್ನು ಕೊಲೆ ಮಾಡಿ ಬಳಿಕ ಮಗು ನಾಪತ್ತೆಯಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಈ ಹಿನ್ನೆಲೆ ಪೊಲೀಸರು ಮಹಿಳೆ ಕೆಲಸ ಮಾಡುತ್ತಿದ್ದ ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಗು ಕಟ್ಟಡದಿಂದ ಹೊರಬಾರದಿದ್ದನ್ನು ಗಮನಿಸಿ ಮಗುವಿನ ಕುರಿತು ಮಹಿಳೆಯನ್ನು ಪ್ರಶ್ನೆ ಮಾಡಿದರು. ಈ ವೇಳೆ ಮಹಿಳೆ ಸರಿಯಾಗಿ ಉತ್ತರಿಸಲಿಲ್ಲ. ಬಳಿಕ ನಾಪತ್ತೆಯಾದ ಮಗುವನ್ನು ಹುಡುಕುವ ಸಲುವಾಗಿ ಶ್ವಾನದಳವನ್ನು ಬಳಸಿದರು. ಆದರೆ ಮಗು ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಬಿಟ್ಟು ಆಚೆ ಹೋಗಿರುವ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ.

ಬಳಿಕ ಮಹಿಳೆ ತಾನು ತಪ್ಪಿಸಿಕೊಳ್ಳುವ ಸಲುವಾಗಿ ಜಾರ್ಖಂಡ್‌ನಲ್ಲಿರುವ ತನ್ನ ಪ್ರಿಯಕರನೇ ಮಗುವನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಮಹಿಳೆಯ ಮಾಹಿತಿಯ ಆಧಾರದ ಮೇಲೆ ಪ್ರಿಯಕರನನ್ನು ಸಂಪರ್ಕಿಸಿದ ಪೊಲೀಸರು ಆತನನ್ನು ವಿಚಾರಿಸಿದಾಗ ತಾನು ಸೂರತ್‌ಗೆ ಬರಲೇ ಇಲ್ಲ ಎಂಬ ಮಾಹಿತಿಯನ್ನು ನೀಡಿದ್ದಾನೆ. ಬಳಿಕ ಪೊಲೀಸರು ಮಹಿಳೆಯ ವಿಚಾರಣೆಯನ್ನು ತೀವ್ರಗೊಳಿಸಿದಾಗ ಆಕೆ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದು, ಮೃತದೇಹವನ್ನು ಎಲ್ಲಿ ಬಚ್ಚಿಟ್ಟಿದ್ದೀಯಾ ಎಂದು ಕೇಳಿದಾಗ ಮೊದಲಿಗೆ ಸುಳ್ಳು ಮಾಹಿತಿಯನ್ನು ನೀಡಿದ್ದಾಳೆ.

ಮೊದಲಿಗೆ ಮಗುವಿನ ಶವವನ್ನು ಗುಂಡಿಯಲ್ಲಿ ಹೂತಿರುವುದಾಗಿ ಹೇಳಿದಳು. ಪೊಲೀಸರು ಆ ಜಾಗವನ್ನು ಪರಿಶೀಲಿಸಿದಾಗ ಅಲ್ಲಿ ಯಾವುದೇ ಶವ ಪತ್ತೆಯಾಗಲಿಲ್ಲ. ಬಳಿಕ ಮಗುವಿನ ಮೃತದೇಹವನ್ನು ಕೊಳವೊಂದಕ್ಕೆ ಎಸೆದಿರುವುದಾಗಿ ಹೇಳಿದಳು. ಆದರೆ ಪೊಲೀಸರಿಗೆ ಅಲ್ಲಿಯೂ ಮಗುವಿನ ಶವ ಸಿಗಲಿಲ್ಲ. ಬಳಿಕ ಪೊಲೀಸರು ಮಹಿಳೆಯ ವಿಚಾರಣೆಯನ್ನು ಕಠಿಣಗೊಳಿಸಿದರು. ಈ ವೇಳೆ ಮಗುವಿನ ಮೃತದೇಹವನ್ನು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಶೌಚಾಲಯದ ಗುಂಡಿಗೆ ಎಸೆದಿರುವುದಾಗಿ ಬಾಯ್ಬಿಟ್ಟಿದ್ದಾಳೆ. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮಗುವಿನ ಮೃತದೇಹ ಶೌಚಾಲಯದ ಗುಂಡಿಯಲ್ಲಿ ಪತ್ತೆಯಾಗಿದೆ.

ಮಗುವನ್ನು ಕೊಂದಿರುವ ಹಿಂದಿನ ಉದ್ದೇಶದ ಕುರಿತು ಮಹಿಳೆಯನ್ನು ಕೇಳಿದಾಗ, ತಾನು ಮೂಲತಃ ಜಾರ್ಖಂಡ್‌ನವಳಾಗಿದ್ದು, ಅಲ್ಲಿ ಒಬ್ಬನನ್ನು ಪ್ರೀತಿಸುತ್ತಿದ್ದೇನೆ. ಆತನ ಜೊತೆಗಿರಲು ಮಗುವಿನೊಂದಿಗೆ ಹೋದರೆ ಆತ ತನ್ನನ್ನು ಸ್ವೀಕರಿಸುದಿಲ್ಲ ಎಂದು ಮಗುವನ್ನು ಹತ್ಯೆ ಮಾಡಿರುವುದಾಗಿ ಸತ್ಯಾಂಶ ಒಪ್ಪಿಕೊಂಡಿದ್ದಾಳೆ.

ಆಶ್ಚರ್ಯಕರ ವಿಷಯವೆಂದರೆ ಮಗುವಿನ ಹತ್ಯೆಯ ಬಳಿಕ ಮಗುವಿನ ಮೃತದೇಹವನ್ನು ಮರೆಮಾಚುವ ಸಲುವಾಗಿ ಆಕೆ ದೃಶ್ಯಂ ಎಂಬ ಸಿನಿಮಾವನ್ನು ನೋಡಿದ್ದಾಳೆ. ಅದರಲ್ಲಿ ಕೊಲೆಯ ಬಳಿಕ ಶವವನ್ನು ವಿಲೇವಾರಿ ಮಾಡುವ ದೃಶ್ಯವಿದ್ದು, ಯಾವುದೇ ಬಂಧನವಾಗದೇ ಪ್ರಕರಣ ಕೊನೆಗೊಳ್ಳುತ್ತದೆ. ಅದೇ ರೀತಿ ಈ ಮಹಿಳೆ ತಾನು ಈ ವಿಧಾನವನ್ನು ಅನುಸರಿಸುವುದರಿಂದ ಪೊಲೀಸರಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಮತ್ತು ತನ್ನ ಪ್ರಿಯಕರನೊಂದಿಗೆ ಸುಖವಾಗಿ ಇರಬಹುದು ಎಂದುಕೊಂಡಿದ್ದಳು. ಆದರೆ ಇದೀಗ ಪೊಲೀಸರ ಅತಿಥಿಯಾಗಿ ಸೆರೆಮನೆ ವಾಸ ಅನುಭವಿಸುತ್ತಿದ್ದಾಳೆ

You cannot copy content from Baravanige News

Scroll to Top