Sunday, September 8, 2024
Homeಸುದ್ದಿವಿರೋಧಕ್ಕೆ ಡೋಂಟ್ ಕೇರ್, ಮಂಗಳೂರು ವಿವಿ ಕಾಲೇಜಿಗೆ ಹಿಂದೂ ಮುಖಂಡ ಅತಿಥಿ!

ವಿರೋಧಕ್ಕೆ ಡೋಂಟ್ ಕೇರ್, ಮಂಗಳೂರು ವಿವಿ ಕಾಲೇಜಿಗೆ ಹಿಂದೂ ಮುಖಂಡ ಅತಿಥಿ!

ಮಂಗಳೂರು (ಜೂ.28): ಹಿಜಾಬ್ ವಿವಾದ ಭುಗಿಲೆದ್ದಿದ್ದ ಮಂಗಳೂರಿನ ವಿವಿ ಕಾಲೇಜು ಕಾರ್ಯಕ್ರಮಕ್ಕೆ ಹಿಂದೂ ಮುಖಂಡನಿಗೆ ಆತಿಥ್ಯ ನೀಡಿದ್ದರ ಬಗ್ಗೆ ಅಪಸ್ವರ ಕೇಳಿಬಂದರೂ ಇಂದು ಕಾಲೇಜು ಕಾರ್ಯಕ್ರಮದಲ್ಲಿ ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಭಾಗಿಯಾಗಿದ್ದಾರೆ‌. ಈ ಮೂಲಕ ಕೊನೆಗೂ ಎಬಿವಿಪಿ ನೇತೃತ್ವದ ಕಾಲೇಜು ವಿದ್ಯಾರ್ಥಿ ಸಂಘ ಹಿಂದೂ ಮುಖಂಡನನ್ನು ಕಾರ್ಯಕ್ರಮಕ್ಕೆ ಕರೆ ತಂದಿದೆ.

ಮಂಗಳೂರಿನ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಜೂ.23ರಂದು ಪ್ರತಿಭಾ ದಿನಾಚರಣೆ ಹಾಗೂ ಜೂ.24ರಂದು ಕಾಲೇಜು ವಾರ್ಷಿಕೋತ್ಸವ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಜೂ.23ರ ಪ್ರತಿಭಾ ದಿನಾಚರಣೆ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆ ಮುಖಂಡ ಶ್ರೀಕಾಂತ್‌ ಶೆಟ್ಟಿಕಾರ್ಕಳ ಅವರನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ಎನ್‌ಎಸ್‌ಯುಐ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ನಗರ ಪೊಲೀಸ್‌ ಆಯುಕ್ತರಿಗೂ ದೂರು ನೀಡಿತ್ತು. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರು ವಿವಿ ಕಾಲೇಜು ಆಡಳಿತವು ಈ ಎರಡೂ ಕಾರ್ಯಕ್ರಮಗಳನ್ನು ಮುಂದೂಡಿತ್ತು.

ಎಬಿವಿಪಿ ನೇತೃತ್ವದ ವಿದ್ಯಾರ್ಥಿ ಸಂಘದಿಂದ ಶ್ರೀಕಾಂತ್ ಶೆಟ್ಟಿಗೆ ಆಹ್ವಾನ ನೀಡಲಾಗಿದ್ದು, ಶ್ರೀಕಾಂತ್ ಶೆಟ್ಟಿಗೆ ಆಹ್ವಾನ ನೀಡಿದ್ದಕ್ಕೆ ಎನ್ಎಸ್ ಯುಐ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಕಾಲೇಜಿನಲ್ಲಿ ಕೋಮು ವಿಷಬೀಜ ಭಿತ್ತಲು ಯತ್ನ ಅಂತ ಆರೋಪಿಸಿತ್ತು. ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಯಲು ಬಿಡಲ್ಲ ಅಂತ ಎಬಿವಿಪಿಗೆ ಎಚ್ಚರಿಕೆ ನೀಡಿತ್ತು. ಅಲ್ಲದೇ ಮಂಗಳೂರು ಕಮಿಷನರ್ ಹಾಗೂ ಕಾಲೇಜು ಪ್ರಾಂಶುಪಾಲರಿಗೂ ಎನ್ಎಸ್ ಯುಐ ದೂರು ನೀಡಿದ್ದು, ಶ್ರೀಕಾಂತ್ ಶೆಟ್ಟಿ ಅತಿಥಿಯಾದ್ರೆ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿತ್ತು.

ಹೀಗಾಗಿ ಆವತ್ತು ಕಾಲೇಜು ಆಡಳಿತ ಮಂಡಳಿ ಕಾರ್ಯಕ್ರಮ ರದ್ದು ಮಾಡಿ ದಿನಾಂಕ ಮುಂದೂಡಿತ್ತು. ಆದರೆ ಇಂದು ಮತ್ತೆ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ ಕಾರ್ಯಕ್ರಮ ನಡೆದಿದ್ದು, ಅತಿಥಿಯಾಗಿ ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಭಾಗಿಯಾಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುತವಾಗಿ ಕಾರ್ಯಕ್ರಮ ಮುಕ್ತಾಯವಾಗಿದೆ.

ಪ್ರತಿಭಟನೆ ಎಚ್ಚರಿಕೆ ನೀಡಿದ್ದ ಎನ್ಎಸ್ ಯುಐ ಮುಖಂಡರು ಪೊಲೀಸರ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಟ್ಟಿದ್ದಾರೆ‌. ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕೋಮು ಪ್ರಚೋದನೆ ಭಾಷಣ ಮಾಡಿದಲ್ಲಿ ಪೊಲೀಸರು ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಅದರೆ ಕೊನೆಗೂ ಹಿಂದೂ ಮುಖಂಡ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮ ಸಂಪನ್ನಗೊಂಡಿದೆ. ಈ ಹಿಂದೆ ಹಿಜಾಬ್ ವಿವಾದ, ಸಾವರ್ಕರ್ ಭಾವಚಿತ್ರ ಹಾಗೂ ಭಗವಾಧ್ಬಜ ಹಿಡಿದ ಭಾರತ್ ಮಾತೆ ಪೂಜನಾ ಕಾರಣದಿಂದ ವಿವಾದಕ್ಕೆ ಕಾರಣವಾಗಿದ್ದ ಕಾಲೇಜು ಇದಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News