ಸರಗಳ್ಳತನ ಹಾಗೂ ದ್ವಿಚಕ್ರ ವಾಹನ ದೋಚುತ್ತಿದ್ದ ಖತರ್ನಾಕ್ ಕಳ್ಳರಿಬ್ಬರ ಬಂಧನ

ಮಂಗಳೂರು : ದ.ಕ ಹಾಗೂ ಉಡುಪಿ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ದ್ವಿಚಕ್ರ ವಾಹನ ದೋಚುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಮಂಗಳೂರು ನಗರ ಪೊಲೀಸರು ಹೆಡೆಮುರಿ‌ ಕಟ್ಟಿದ್ದಾರೆ.

ಬಂಧಿತರನ್ನು ಕೃಷ್ಣಾಪುರ ಮೂಲದ ಹಬೀಬ್ ಹಾಸನ ಮತ್ತು ಉಳ್ಳಾಲದ ಮೊಹಮ್ಮದ್ ಫೈಸಲ್ ಎಂದು ಗುರುತಿಸಲಾಗಿದೆ.

ಇಬ್ಬರು ಈ ಹಿಂದೆ ಮಂಗಳೂರು ಕಾರಾಗೃಹ ಹಾಗೂ ಕಾರವಾರ ಜೈಲಿನಲ್ಲಿದ್ದು ಸಜೆ ಅನುಭವಿಸಿದ್ದರು. ಇಬ್ಬರ ಬಂಧನದ ನಂತರ 12 ಪ್ರಕರಣಗಳ ಪೈಕಿ 8 ಚೈನ್ ಸ್ನ್ಯಾಚಿಂಗ್ ಮತ್ತು ನಾಲ್ಕು ಬೈಕ್ ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದೆ. ಬಂಧಿತರಿಂದ 14 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಹಬೀಬ್ ಹಸನ್ ವಿರುದ್ಧ 35 ಪ್ರಕರಣಗಳು ದಾಖಲಾಗಿದ್ದು, ಮೊಹಮ್ಮದ್ ಫೈಸಲ್ ವಿರುದ್ಧ ಉಡುಪಿ, ದಕ್ಷಿಣ ಕನ್ನಡ ಮತ್ತು ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ 15 ಪ್ರಕರಣಗಳಿವೆ. ಮೊಹಮ್ಮದ್ ಫೈಸಲ್ ಎಂಬಾತ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಅಪರಾಧಿಯಾಗಿದ್ದ.

ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ತಡಂಬೈಲ್‌ ಎಂಬಲ್ಲಿ ಪುಷ್ಪಾವತಿ ಎಂಬವರು ಜೂ.2 ರಂದು ಮುಂಜಾನೆ ತಮ್ಮ ಮನೆಯ ಕಂಪೌಂಡ್‌ ಒಳಭಾಗದಲ್ಲಿದ್ದ ಬಾವಿಯಿಂದ ನೀರು ಸೇದುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಕುತ್ತಿಗೆಯಲ್ಲಿದ್ದ ಅಂದಾಜು 1.25 ಲಕ್ಷ ರೂ. ಬೆಲೆಯ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದರು. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಕಳ್ಳರು ಕದ್ದ ಚಿನ್ನಾಭರಣವನ್ನು ಮಂಗಳೂರು ನಗರ ಮಾರಾಟಕ್ಕೆ ಯತ್ನಿಸಿ ವಿಫಲರಾಗಿ ಸುರತ್ಕಲ್ ನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿರುವುದು ಪೊಲೀಸರಿಗೆ ತಿಳಿದು ಬಂದಿತ್ತು. ಹೀಗಾಗಿ ಮಾದವ ನಗರ ಕೊಡಿಪ್ಪಾಡಿ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ, ದಿಚಕ್ರವಾಹನವೊಂದನ್ನು ನಿಲ್ಲಿಸಲು ಸೂಚಿಸಿದಾಗ ಸವಾರರಿಬ್ಬರು ವಾಹನದಿಂದ ಇಳಿದು ಓಡಿದ್ದರು. ಇವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹಲವು ಪ್ರಕರಣಗಳ ಬಯಲಿಗೆ ಬಂದಿತ್ತು.

ವಯಸ್ಸಾದ ಮಹಿಳೆಯರನ್ನು ಗುರಿಯಾಗಿಸುತ್ತಿದ್ದ ಆರೋಪಿಸಿಗಳು ಕದ್ದ ದ್ವಿಚಕ್ರ ವಾಹನಗಳನ್ನು ಚೈನ್ ಸ್ನ್ಯಾಚಿಂಗ್ ಗೆ ಬಳಸುತ್ತಿದ್ದರು.ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ 8000 ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಗಳ ಪತ್ತೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್‌ ಜೈನ್ ಹಾಗೂ ಉಪ ಪೊಲೀಸ್ ಆಯುಕ್ತರಾದ (ಕಾನೂನು ಮತ್ತು ಸುವ್ಯವಸ್ಥೆ) ಅಂಶು ಕುಮಾರ್, ಉಪ ಪೊಲೀಸ್‌ ಆಯುಕ್ತರಾದ (ಅಪರಾಧ ಮತ್ತು
ಸಂಚಾರ) ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಇವರ
ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್‌ ರವರ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಅರುಣ್ ಕುಮಾರ್ ಡಿ
ಮತ್ತು ಎ.ಎಸ್.ಐ ರಾಧಾಕೃಷ್ಣ, ಹೆಚ್.ಸಿ ಅಣ್ಣಪ್ಪ, ಪಿ.ಸಿ ಕಾರ್ತಿಕ್ ಕುಲಾಲ್, ಪಿ.ಸಿ ಮಣಿಕಂಠ ಹೆಚ್.ಎ,
ಪಿ.ಸಿ ನಾಗಾರಾಜ, ಪಿ.ಸಿ ಶಿವರಾಮ ಪಣಂಬೂರು ಪೊಲೀಸ್ ಠಾಣೆಯ ಪಿ.ಎಸ್.ಐ ಜ್ಞಾನಶೇಖರ ಮತ್ತು ಪಿ.ಸಿ
ನಿಂಗಪ್ಪ ಹಾಗೂ ಬಜ್ಜೆ ಪೊಲೀಸ್ ಠಾಣಾ ಎ.ಎಸ್.ಐ ಕುಶಾಲ್ ಮಣಿಯಾಣಿ, ಕಾವೂರು ಪೊಲೀಸ್ ಠಾಣಾ ಹೆಚ್.ಸಿ ಇಸಾಕ್, ಮೂಡಬಿದ್ರೆ ಪೊಲೀಸ್ ಠಾಣಾ ಹೆಚ್.ಸಿ ಅಕೀಲ್ ಅಹ್ಮದ್ ಮತ್ತು ಹುಸೇನ್ ರವರುಗಳು ಪಾಲ್ಗೊಂಡಿದ್ದರು.

Scroll to Top