ನವದೆಹಲಿ, ಜೂ.27: ವಿಶೇಷ ನೆರವು ಯೋಜನೆಯಡಿ ಪ್ರಸಕ್ತ ಹಣಕಾಸು ವರ್ಷದಲ್ಲಿ 16 ರಾಜ್ಯಗಳಿಗೆ 56,415 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಬಜೆಟ್‌ನಲ್ಲಿ ಘೋಷಿಸಲಾದ ನೆರವು ಯೋಜನೆ ಇದಾಗಿದೆ.
ರಾಜ್ಯಗಳಿಂದ ಬಂಡವಾಳ ವೆಚ್ಚವನ್ನು ಹೆಚ್ಚಿಸಲು 2023-24 ರ ಕೇಂದ್ರ ಬಜೆಟ್‌ನಲ್ಲಿ ‘ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24’ ಯೋಜನೆಯನ್ನು ಘೋಷಿಸಲಾಗಿತ್ತು. ಈ ಯೋಜನೆಯಡಿ ಕರ್ನಾಟಕಕ್ಕೆ 3647 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.
ಆರೋಗ್ಯ, ಶಿಕ್ಷಣ, ನೀರಾವರಿ, ನೀರು ಸರಬರಾಜು, ವಿದ್ಯುತ್, ರಸ್ತೆಗಳು, ಸೇತುವೆಗಳು ಮತ್ತು ರೈಲ್ವೆ ಸೇರಿದಂತೆ ವಿವಿಧ ವಲಯಗಳಲ್ಲಿ ಬಂಡವಾಳ ಹೂಡಿಕೆ ಯೋಜನೆಗಳಿಗೆ ಕೇಂದ್ರ ಅನುಮೋದನೆ ನೀಡಿದೆ. ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ಹಾಗೂ ಬಿಹಾರಕ್ಕೆ ಹೆಚ್ಚಿನ ನೆರವು ಘೋಷಿಸಲಾಗಿದೆ. ಈ ರಾಜ್ಯಗಳಿಗೆ ಕ್ರಮವಾಗಿ 7,523 ಕೋಟಿ ರೂ., 7,850 ರೂ, ಹಾಗೂ 9,640 ಕೋಟಿ ರೂ. ಘೋಷಣೆ ಮಾಡಲಾಗಿದೆ.
ಬಂಡವಾಳ ಹೂಡಿಕೆ ಯೋಜನೆಯಡಿಯಲ್ಲಿ, ರಾಜ್ಯ ಸರ್ಕಾರಗಳಿಗೆ ವಿಶೇಷ ಸಹಾಯವನ್ನು 50 ವರ್ಷಗಳ ಬಡ್ಡಿ ರಹಿತ ಸಾಲದ ರೂಪದಲ್ಲಿ ನೀಡಲಾಗುತ್ತದೆ. 2023-24ರ ಹಣಕಾಸು ವರ್ಷದಲ್ಲಿ 1.3 ಲಕ್ಷ ಕೋಟಿ ರೂ. ನೀಡಲು ಘೋಷಣೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.