ಯಕ್ಷಗಾನ ಗುರು, ಭಾಗವತ ತೋನ್ಸೆ ಜಯಂತ ಕುಮಾರ್ ವಿಧಿವಶ

ಉಡುಪಿ, ಜೂ.26: ಯಕ್ಷಶಿಕ್ಷಣದ ಗುರು, ಭಾಗವತ, ವೇಷಧಾರಿ ತೋನ್ಸೆ ಜಯಂತ್‌ ಕುಮಾರ್‌ ಅವರು ಇಂದು ಮುಂಜಾನೆ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.

1946ರಲ್ಲಿ ತೋನ್ಸೆಯವರು ಚೇತನ ಪ್ರೌಢಶಾಲೆ, ಹಂಗಾರಕಟ್ಟೆಯಲ್ಲಿ ಕಛೇರಿ ಅಧೀಕ್ಷಕರಾಗಿ ನಿವೃತ್ತರಾಗಿದ್ದರು. ಆದರೆ ಯಕ್ಷಗಾನದಲ್ಲಿ ಸದಾ ಪ್ರವೃತ್ತರು.

ಸಂಚಾರಿ ಯಕ್ಷಗಾನ ಭಂಡಾರವೆಂದೇ ಖ್ಯಾತರಾಗಿದ್ದ ತೋನ್ಸೆ ಕಾಂತಪ್ಪ ಮಾಸ್ತರರ ಸುಪುತ್ರರಾಗಿದ್ದ ಇವರಿಗೆ ತಂದೆಯೇ ಯಕ್ಷಗಾನ ಗುರು. ಆರಂಭದಲ್ಲಿ ಯಕ್ಷಗಾನ ವೇಷಧಾರಿಯಾಗಿ ಆಮೇಲೆ ಯಕ್ಷಗಾನ ಗುರುಗಳಾಗಿ ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಉಡುಪಿ ಶಾಸಕರ ನೇತೃತ್ವದ ಯಕ್ಷಶಿಕ್ಷಣ ಟಸ್ಟ್ ನಲ್ಲಿ ಆರಂಭದಿಂದಲೂ ಗುರುಗಳಾಗಿ ಅದರ ಯಶಸ್ಸಿಗೆ ಕಾರಣರಾಗಿದ್ದರು.

ಅವರು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀರಾಮ ವಿಠಲ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ.

ಯಕ್ಷಗಾನವು ಜಯಂತ ಕುಮಾರರಿಗೆ ವಂಶ ಪಾರಂಪರ್ಯವಾಗಿ ಬಂದ ಬಳುವಳಿ. ಅವರ ತೀರ್ಥರೂಪರು ಯಕ್ಷಗಾನದ ಭಾಗವತರಾಗಿ, ಗುರುಗಳಾಗಿ ಪ್ರಸಿದ್ಧರು. ಅಜ್ಜ ತಿಮ್ಮಪ್ಪ ಮಾಸ್ತರರು ಭಾಗವತರು. ದೊಡ್ಡಪ್ಪ ಗೋಳಿಗರಡಿ ಮೇಳದ ಕಲಾವಿದರಾಗಿದ್ದರು. ಈ ವಂಶೀಯ ಹಿನ್ನೆಲೆ ಅವರು ಯಕ್ಷಗಾನದತ್ತ ಆಕರ್ಷಿತರಾಗಲು ಪ್ರೇರಕವಾಯಿತು. ಕಾಂತಪ್ಪ ಮಾಸ್ತರರು ಶಾಲಾ ವೇಳೆಯ ಅನಂತರ ಅನೇಕ ಕಡೆ ಯಕ್ಷಗಾನ ತರಗತಿ ನಡೆಸುತ್ತಿದ್ದರು. ತಂದೆಯೊಂದಿಗೆ ಈ ತಿರುಗಾಟದಲ್ಲಿ ಕಲಿತ ಬಾಲಪಾಠ ಗಟ್ಟಿಯಾಯಿತು. ನಾರ್ಣಪ್ಪ ಉಪ್ಪೂರರು ಹಂಗಾರಟ್ಟೆ ಯಕ್ಷಗಾನ ಕೇಂದ್ರ ಸ್ಥಾಪಿಸಿದಾಗ ಅವರ ಮತ್ತು ಬೇಳಂಜೆ ತಿಮ್ಮಪ್ಪ ನಾಯ್ಕರ ಶಿಷ್ಯರಾಗುವ ಸುವರ್ಣಾವಕಾಶ ಪ್ರಾಪ್ತವಾಯಿತು. ಅದನ್ನು ಚೆನ್ನಾಗಿಯೇ ಬಳಸಿಕೊಂಡ ಜಯಂತರು, ಉಪ್ಪೂರರ ಶೈಲಿಯನ್ನು ಮೈಗೂಡಿಸಿಕೊಂಡರು. ಪರಂಪರೆಯ ಶೈಲಿಗೆ ತನ್ನ ತುಂಬು ಕಂಠಸಿರಿಯನ್ನು ಮೇಳೈಸಿ ಪ್ರಸಿದ್ಧ ಭಾಗವತರಾಗಿ ಮೂಡಿಬಂದರು.

ಎಳವೆಯಲ್ಲಿ ಯಕ್ಷಗಾನ ವೇಷಗಳನ್ನು ಮಾಡುತ್ತಿದ್ದ ಇವರು ಬಡಗಿನ ಪರಂಪರೆಯ ಸ್ತ್ರೀ-ಪುರುಷ ಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸಿದ್ದಾರೆ. ಉಪ್ಪೂರರ ಭಾಗವತಿಕೆಗೆ ಹಿಮ್ಮೇಳವಾದಕನಾಗಿ ಭಾಗವಹಿಸಿದ್ದು ತನ್ನ ಭಾಗ್ಯವೆಂದು ನೆನಪಿಸಿಕೊಳ್ಳುತ್ತಾರೆ. ಭಾಗವತರಾಗಿ ಅನೇಕ ಆಟ- ಕೂಟ ಗಳಲ್ಲಿ ತಮ್ಮ ಸಿರಿಕಂಠ ಮೊಳಗಿಸಿದ್ದಾರೆ. ಯಕ್ಷಗಾನದ ತಂಡದ ಭಾಗವತರಾಗಿ ದಿಲ್ಲಿ, ಸಿಂಗಾಪುರ ಮತ್ತು ನಾಡಿನ ಅನ್ಯಾನ್ಯ ಪ್ರದೇಶಗಳಲ್ಲಿ ಭಾಗವಹಿಸಿದ್ದಾರೆ.

You cannot copy content from Baravanige News

Scroll to Top