ದಕ, ಜೂ.22: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪಿಡಿಒ 20 ಸಾವಿರ ರೂ. ಲಂಚ ಸ್ವೀಕರಿಸುವಾಗ ಸ್ಥಳದಲ್ಲಿಯೇ ಲೋಕಾಯುಕ್ತ ಪೋಲೀಸರ ಬಲೆಗೆ ಸಿಕ್ಕಿಬಿದ್ದ ಘಟನೆ ಗುರುವಾರ ಜೂನ್ 22 ರಂದು ನಡೆದಿದೆ.
ಬಲೆಗೆ ಬಿದ್ದ ಅಧಿಕಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್.ಜಿ.ಎನ್ ಎನ್ನುವವರಾಗಿದ್ದು, ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿಯೊಬ್ಬರು ಕೌಕ್ರಾಡಿಯ ತಮ್ಮ ಜಮೀನಿನ ಖಾತೆ ಬದಲಾವಣೆ ಮಾಡಲು 2017ನೇ ಇಸವಿಯಲ್ಲಿ ಕೌಕ್ರಾಡಿ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದು, ಈಗಲೂ ಖಾತೆ ಬದಲಾವಣೆ ಆಗದೇ ಇರುವುದರಿಂದ 2021ರಲ್ಲಿ ಮತ್ತೆ ಖಾತೆ ಬದಲಾವಣೆ ಬಗ್ಗೆ ಗ್ರಾಮ ಪಂಚಾಯತ್‌ಗೆ ಅರ್ಜಿಯನ್ನು ಸಲ್ಲಿಸಿ, ಶುಲ್ಕವನ್ನು ಸಂದಾಯ ಮಾಡಿದರೂ ಕೆಲಸ ಆಗಿರಲಿಲ್ಲ.
ಜೂನ್ 20ರಂದು ಕೌಕ್ರಾಡಿ ಗ್ರಾ.ಪಂ.ಕಚೇರಿಗೆ ವಿಚಾರಿಸಲು ಹೋದಾಗ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್.ಜಿ.ಎನ್ ಕೆಲಸ ಮಾಡಿಕೊಡಲು 20,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕರ್ನಾಟಕ ಲೋಕಾಯುಕ್ತ ಮಂಗಳೂರು ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್ ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಕಲಾವತಿ.ಕೆ, ಚಲುವರಾಜು.ಬಿ.ಮತ್ತು ಪೊಲೀಸ್ ನಿರೀಕ್ಷಕಅಮಾನುಲ್ಲಾ.ವಿ, ವಿನಾಯಕ ಬಿಲ್ಲವ ಅವರು ಸಿಬಂದಿಗಳೊಂದಿಗೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದಾರೆ.