Wednesday, September 27, 2023
Homeಸುದ್ದಿಕರಾವಳಿಕಾಪು ಪೊಲೀಸರ ಕಾರ್ಯಾಚರಣೆ : ಇಬ್ಬರು ಅಂತರ್ ಜಿಲ್ಲಾ ಸರಗಳ್ಳರ ಬಂಧನ..!!!

ಕಾಪು ಪೊಲೀಸರ ಕಾರ್ಯಾಚರಣೆ : ಇಬ್ಬರು ಅಂತರ್ ಜಿಲ್ಲಾ ಸರಗಳ್ಳರ ಬಂಧನ..!!!

ಉಡುಪಿ : ಕುಂಜಾರುಗಿರಿ ಸಮೀಪದ ಪಾಜಕದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿ ಮರಳುತ್ತಿದ್ದ ಬ್ರಾಹ್ಮಣರತೋಟ ನಿವಾಸಿ ಶಕುಂತಳಾ ಜಿ. ಭಟ್ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಪಡುಬಿದ್ರಿಯಲ್ಲಿ ಕಾಪು ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿ.ಸಿ.ರೋಡ್ ನಿವಾಸಿ ಮಹಮ್ಮದ್ ರಫೀಕ್ (33) ಮತ್ತು ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ತೌಸಿಫ್ ಸಾಧಿಕ್ (31)ಬಂಧಿತ ಆರೋಪಿಗಳಾಗಿದ್ದು, ಕೃತ್ಯಕ್ಕೆ ಬಳಸಿದ ಬೈಕ್, 3 ಮೊಬೈಲ್, 2,500 ರೂ. ನಗದು, ಬಟನ್ ಇದ್ದ ಎರಡು ಚೂರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಅಂತರ್ ಜಿಲ್ಲಾ ಸರಗಳ್ಳರಾಗಿದ್ದಾರೆ. ಬಂದಿತರ ಪೈಕಿ ಮಹಮ್ಮದ್ ರಫೀಕ್‌ ವಿರುದ್ಧ ಬೆಂಗಳೂರು, ಮಂಗಳೂರು ಕಮಿಷನರೇಟ್ ವ್ಯಾಪ್ತಿ, ದ.ಕ. ಮತ್ತು ಉಡುಪಿ ಜಿಲ್ಲೆಯ 32 ಠಾಣೆಗಳಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿದ್ದು ಬೆಂಗಳೂರಿನಲ್ಲಿ ಒಮ್ಮೆ ಆರು ವರ್ಷ ಹಾಗೂ ಮತ್ತೂಮ್ಮೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ.

ಮಾರ್ಚ್ ತಿಂಗಳಲ್ಲಿ ಜಾಮೀನು ಪಡೆದು ಹೊರಬಂದಿದ್ದು ಮತ್ತೆ ಅದೇ ಮಾದರಿಯ ಕಳ್ಳತನ ನಡೆಸಿ ಪೊಲೀಸರ ಸೆರೆಯಾಗಿದ್ದಾನೆ.

ಮತ್ತೋರ್ವ ಆರೋಪಿ ತೌಸಿಫ್ ಸಾಧಿಕ್ ವಿರುದ್ಧ ಬೆಂಗಳೂರು, ಮಂಗಳೂರು ಮತ್ತು ಮೂಲ್ಕಿ ಠಾಣೆಗಳಲ್ಲಿ ನಾಲ್ಕು ಸರಗಳ್ಳತನ ಪ್ರಕರಣಗಳು ದಾಖಲಾಗಿವೆ.

ಆರೋಪಿಗಳು ನೀಡಿರುವ ಮಾಹಿತಿಯಂತೆ ಜೂ. 12ರಂದು ಕಾಪುವಿನಲ್ಲಿ ಕಳವುಗೈದ ಎರಡು ಚಿನ್ನದ ಸರ, ಬ್ರಹ್ಮಾವರದಲ್ಲಿ ಕಳವಾಗಿರುವ ಚಿನ್ನದ ಸರ, ಮೇ 7ರಂದು ಬೆಂಗಳೂರಿನ ಮಹಾಲಕ್ಷ್ಮೀಪುರಂನಲ್ಲಿ ಕಳವಾಗಿರುವ ಚಿನ್ನದ ಸರ, ಮೇ 27ರಂದು ಮಲ್ಲೇಶ್ವರಂನಲ್ಲಿ ಕಳವಾಗಿರುವ ಎರಡು ಎಳೆಯ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹಾಕೆ ಮಚ್ಚೇಂದ್ರ ಅವರು ತಿಳಿಸಿದ್ದಾರೆ.

ಆರೋಪಿ ರಫೀಕ್‌ಗೆ ಬೈಕ್ ಚಾಲನೆ ಗೊತ್ತಿಲ್ಲವಾಗಿದ್ದು ಒಂದೊಂದು ಪ್ರಕರಣಕ್ಕೆ ಒಬ್ಬೊಬ್ಬರನ್ನು ಬೈಕ್ ಸವಾರರನ್ನಾಗಿ ಬಳಸಿಕೊಳ್ಳುತ್ತಿದ್ದನು.

ಜೂ. 12ರಂದು ಮಧ್ಯಾಹ್ನ 12.10ಕ್ಕೆ ಬ್ರಹ್ಮಾವರದಲ್ಲಿ ಮತ್ತು 2.15ರ ವೇಳೆಗೆ ಕಾಪುವಿನಲ್ಲಿ ಸರಗಳ್ಳತನ ನಡೆಸಿ ಪರಾರಿಯಾಗಿದ್ದರು.

ಆದರೆ ಕಾಪು ಪೊಲೀಸರು ನಡೆಸಿದ ಕ್ಷಿಪ್ರಗತಿಯ ಕಾರ್ಯಾಚರಣೆ, ವಿವಿಧೆಡೆಯ ಸಿಸಿ ಕ್ಯಾಮರಾ ಫೂಟೇಜ್‌ಗಳು, ಟೋಲ್‌ಗೇಟ್ ಕ್ಯಾಮರಾಗಳ ಸಹಕಾರದೊಂದಿಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದು, ಕಾರ್ಕಳ ಮತ್ತು ಉಡುಪಿ ಪೊಲೀಸ್ ಉಪಾಧೀಕ್ಷಕರು, ಕಾಪು ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ ಅವರ ನೇತೃತ್ವದಲ್ಲಿ ಹಿರಿಯಡ್ಕ ಎಸ್ಐ ಮಂಜುನಾಥ ಹಾಗೂ ಅಪರಾಧ ವಿಭಾಗದ ಸಿಬಂದಿಗಳಾದ ಪ್ರವೀಣ್ ಕುಮಾರ್, ರಾಜೇಶ್, ನಾರಾಯಣ್, ಸಂದೇಶ್,ಆರ್‌ಡಿಸಿ ವಿಭಾಗದ ದಿನೇಶ್ ಮತ್ತು ನಿತಿನ್ ಅವರ ಕಾರ್ಯಾಚರಣೆಯಿಂದಾಗಿ ಸರಗಳ್ಳರ ಬಂಧನವಾಗಿದ್ದು, ಪೊಲೀಸರಿಗೆ ನಗದು ಮತ್ತು ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುವುದು ಎಂದಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News