ಉಡುಪಿ, ಜೂ.16: ಮಾಂಸಪ್ರಿಯರಿಗೆ ಬೆಲೆ ಏರಿಕೆ ಶಾಕ್ ತಟ್ಟಿದ್ದು, ಕೋಳಿ ಮಾಂಸ ದರ ದುಬಾರಿಯಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಕೆ.ಜಿ.ಯೊಂದಕ್ಕೆ ಇದ್ದ 160 ರೂ. ಕ್ರಮೇಣ ಏರಿಕೆಯಾಗುತ್ತಲೆ ಈಗ 290ರೂ.ಗೆ ಮುಟ್ಟಿದೆ.
ಮಾರುಕಟ್ಟೆಯಲ್ಲಿ ವಿದೌಟ್ ಸ್ಕಿನ್ ಮಾಂಸಕ್ಕೆ 260ರಿಂದ 290 ರೂ. ವರೆಗೆ ಏರಿಕೆ ಕಂಡಿದೆ. ಕೆಲವು ದಿನಗಳ ಹಿಂದೆ 230ರಿಂದ 250 ರೂ. ವರೆಗೆ ಇತ್ತು. ವಿದ್ ಸ್ಕಿನ್ ಮಾಂಸಕ್ಕೆ 220ರಿಂದ 260 ರೂ.ಗೆ ದರ ಏರಿದೆ. ಸದ್ಯ ಕುರಿ ಮಾಂಸಕ್ಕೆ (ಮಟನ್) ಕೆ.ಜಿ.ಗೆ 700 ರೂ. ಇದೆ. ಬನ್ನೂರು ಸ್ಪೆಶಲ್ ಮಟನ್ ಕೆ. ಜಿ. 800 ರೂ. ದರದಲ್ಲಿ ಮಾರಾಟವಾಗುತ್ತಿದೆ.
ಕೋಳಿಗೆ ಆಹಾರವಾಗಿ ಬಳಕೆಯಾಗುವ ಧಾನ್ಯ, ಅಕ್ಕಿಹೊಟ್ಟು, ಮೆಕ್ಕೆಜೋಳ, ಸೋಯಾ ಬೆಲೆ ಏರಿಕೆ, ಇಂಧನ ಬೆಲೆ ಹೆಚ್ಚಳದಿಂದ ಸಾಗಣೆ ವೆಚ್ಚ ಅಧಿಕವಾಗಿದೆ. ಬಿಸಿಲಿನಿಂದಾಗಿ ಕೋಳಿಗಳು ಆಹಾರ ತಿನ್ನುವುದು ಕಡಿಮೆ. ನೀರು ಹೆಚ್ಚು ಸೇವಿಸುವುದರಿಂದ ಕೋಳಿಯಲ್ಲಿ ಕೊಬ್ಬು ಪ್ರಮಾಣ ಹೆಚ್ಚಳವಾಗುವುದಿಲ್ಲ. ಬಿಸಿಲಿನ ತಾಪಮಾನಕ್ಕೆ ಕೋಳಿಗಳು ಸಾವನ್ನಪ್ಪುವ ಸಮಸ್ಯೆಯೂ ಇದೆ. ಇದರಿಂದ ಮಾಂಸ ಉತ್ಪಾದನೆ ಸಹಜವಾಗಿ ಕುಂಠಿತವಾಗುತ್ತದೆ ಎಂಬ ಅಭಿಪ್ರಾಯ ಕೋಳಿ ಸಾಕಾಣಿಕೆದಾರರದು.
ಅಲ್ಲದೆ ಕರಾವಳಿಯಲ್ಲಿ ಮಳೆಗಾಲ ಆರಂಭವಾಗಿರುವುದರಿಂದ ತಾಜಾ ಮೀನಿನ ಪೂರೈಕೆ ಇಲ್ಲ. ಚಿಕನ್‌ಗೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿ ವಲಯದವರು.
ಟೊಮ್ಯಾಟೊ, ಶುಂಠಿ, ಅಳಸಂಡೆ, ಕೊತ್ತಂಬರಿ ಸೊಪ್ಪು ದರವು ದುಪ್ಪಟ್ಟಾಗಿದ್ದು, ಅಳಸಂಡೆ ಕೆಜಿ 100 ರೂ.ಗೆ ತಲುಪಿದೆ. ಶುಂಠಿ ಕೆಜಿ 200 ರೂ. ಕೊತ್ತಂಬರಿ ಸೊಪ್ಪು 140ರಿಂದ 150 ರೂ.ಗೆ ಏರಿಕೆಯಾಗಿದೆ. ಟೊಮೇಟೊ 40ರಿಂದ 50 ರೂ., ಬೀನ್ಸ್ ಕೆ.ಜಿ. 100 ರೂ. ಇದೆ. ಮಾರುಕಟ್ಟೆಯಲ್ಲಿ ಸ್ಥಳೀಯವಾಗಿ ಬೆಳೆದ ತರಕಾರಿಗಳು ಸಿಗುತ್ತಿಲ್ಲ.