ದಕ್ಷಿಣ ಕನ್ನಡ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನೆಯಲ್ಲಿ ರಹಸ್ಯ ಹೋಮ-ಹವನ ನಡೆಯುತ್ತಿದೆ ಎನ್ನುವ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಸ್ವತಹ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದಾರೆ.
ಹೋಮ-ಹವನ ಕುಂಜಾಡಿ ತರವಾಡು ಮನೆಯಲ್ಲಿ ನಡೆಯುತ್ತಿದ್ದು, ಪ್ರತೀ ವರ್ಷವೂ ಈ ಹೋಮ ಹಾಗು ಪೂಜೆಗಳು ನಡೆಯುತ್ತಿದೆ. ಯಾರು ಬೇಕಾದರೂ ಈ ಹೋಮ-ಹವನದಲ್ಲಿ ಭಾಗವಹಿಸಲು ಅವಕಾಶವಿದ್ದು, ರಹಸ್ಯವಾಗಿ ಮಾಡಲಾಗುತ್ತಿದೆ ಎನ್ನುವುದು ಸುಳ್ಳು ಸುದ್ಧಿ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟಪಡಿಸಿದ್ದಾರೆ.
ರಾಜಕೀಯದಲ್ಲಿ ಮೂಲೆಗುಂಪಾಗುತ್ತಿರುವ ಮತ್ತು ವಿಶೇಷ ಸ್ಥಾನಮಾನಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷರು ತಮ್ಮ ಮನೆಯಲ್ಲಿ ರಹಸ್ಯ ಹೋಮ-ಹವನಗಳನ್ನು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ಕಳೆದ ಎರಡು ದಿನಗಳಿಂದ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಗ್ರಾಸವಾಗಿತ್ತು.