Saturday, July 27, 2024
Homeಸುದ್ದಿಉಡುಪಿ: ಸೋಲಿನ ಅವಲೋಕನದ ಜೊತೆಗೆ ಮೋದಿ ಮತ್ತೆ ಪ್ರಧಾನಿಯಾಗಲು ಶ್ರಮ; ಶೋಭಾ ಕರಂದ್ಲಾಜೆ

ಉಡುಪಿ: ಸೋಲಿನ ಅವಲೋಕನದ ಜೊತೆಗೆ ಮೋದಿ ಮತ್ತೆ ಪ್ರಧಾನಿಯಾಗಲು ಶ್ರಮ; ಶೋಭಾ ಕರಂದ್ಲಾಜೆ

ಉಡುಪಿ, ಜೂ. 15: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಸೋತಿದ್ದರೂ ಉಡುಪಿ ಜಿಲ್ಲೆಯಲ್ಲಿ ಐದೂ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲೇ ಮುಂಚೂಣಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಸ್ತ ಕಾರ್ಯಕರ್ತರ ಸಾಧನೆ ಅಭಿನಂದನೀಯ. ಪ್ರಸಕ್ತ ಚುನಾವಣೆಯ ಅವಲೋಕನದ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮಗದೊಮ್ಮೆ ದೇಶದ ಪ್ರಧಾನಿಯನ್ನಾಗಿಸಲು ಸಂಘಟಿತರಾಗಿ ಶ್ರಮಿಸೋಣ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಅಲ್ಪಸಂಖ್ಯಾತರ ದರ್ಪ ಹೆಚ್ಚುತ್ತಿದೆ. ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟಗಳು ಅಗತ್ಯವಾಗಿದೆ ಎಂದರು.
ಕೊರೋನ ಸವಾಲಿನ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಪ್ರಗತಿಯ ಪಥದಲ್ಲಿ ಸಾಗುತ್ತಿದ್ದು ಆರ್ಥಿಕ ಸಾಧನೆಯಲ್ಲಿ ವಿಶ್ವದಲ್ಲೇ 5ನೇ ಸ್ಥಾನದಲ್ಲಿದೆ. ವಿವಿಧ ಕ್ಷೇತ್ರಗಳ ಸಾಧನೆಗಳ ಜೊತೆಗೆ ಮುಂದಿನ ಎರಡು ಮೂರು ವರ್ಷಗಳಲ್ಲಿ 3ನೇ ಸ್ಥಾನವನ್ನು ತಲುಪುವ ಗುರಿಯೊಂದಿಗೆ ಭಾರತ ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಭಾರತ ಇಂದು ವಿಶ್ವದೆಲ್ಲೆಡೆ ವಿಶೇಷ ಗೌರವಕ್ಕೆ ಪಾತ್ರವಾಗುತ್ತಿದೆ.
ಜನಸಂಘದ ಕಾಲದಲ್ಲೇ ವಿಶೇಷ ಸಾಧನೆ ಮೂಲಕ ದೇಶದಲ್ಲಿ ಹೆಸರುವಾಸಿಯಾಗಿದ್ದ ಉಡುಪಿ ಜಿಲ್ಲೆ ಮಗದೊಮ್ಮೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 100% ಫಲಿತಾಂಶದೊಂದಿಗೆ ತಲೆ ಎತ್ತಿ ನಿಂತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ದೇಶಕ್ಕೆ ಸಮರ್ಥ ನೇತೃತ್ವ ನೀಡುವ ನಿಟ್ಟಿನಲ್ಲಿ ನರೇಂದ್ರ ಮೋದಿಯವರನ್ನು ಮಗದೊಮ್ಮೆ ಪ್ರಧಾನಿಯನ್ನಾಗಿಸಲು ಎಲ್ಲರೂ ಪಣ ತೊಡಬೇಕು ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿ ಕುಮಾರ್ ರವರು ಮಾತನಾಡಿ, ಬಿಜೆಪಿಗೆ ರಾಜ್ಯದಲ್ಲಿ ಅನಿರೀಕ್ಷಿತ ಫಲಿತಾಂಶ ದೊರೆತರೂ ಉಡುಪಿ ಜಿಲ್ಲೆ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಜಿಲ್ಲೆಯ ಹಿರಿಮೆ ಗರಿಮೆ ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 9 ವರ್ಷಗಳ ಆಡಳಿತದಲ್ಲಿ ಭಾರತ ಸರ್ವ ಸ್ಪರ್ಶಿ, ಸರ್ವ ವ್ಯಾಪಿ ಅಭಿವೃದ್ಧಿಯ ಜೊತೆಗೆ 7.2% ಜಿಡಿಪಿ ದಾಖಲಿಸುವ ಮೂಲಕ ಆರ್ಥಿಕಾಭಿವೃದ್ಧಿಯಲ್ಲಿ ವಿಶ್ವದಲ್ಲೇ ನಂಬರ್ 1 ಸ್ಥಾನದಲ್ಲಿದೆ. ನರೇಂದ್ರ ಮೋದಿಯವರು ಮಗದೊಮ್ಮೆ ದೇಶದ ಪ್ರಧಾನಿಯಾಗಬೇಕೆಂಬ ನಿರೀಕ್ಷೆ ದೇಶವಾಸಿಗಳಲ್ಲಿದೆ. ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಜೂ.23ರಂದು ಪ್ರಧಾನಿ ಮೋದಿಯವರು ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕರೆಯಂತೆ ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ಕೀ ವೋಟರ್ಸ್ ಗಳನ್ನು ಗುರುತಿಸಿ ಬೇಟಿ ಮಾಡುವ ಜೊತೆಗೆ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಸೋಶಿಯಲ್ ಮೀಡಿಯಾ ಟೀಮ್ ಹಾಗೂ ಹಿರಿಯ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸುವ ಮೂಲಕ ಮುಂಬರಲಿರುವ ತಾ.ಪಂ., ಜಿ.ಪಂ., ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಪೂರಕ ವಾತಾವರಣವನ್ನು ಸದೃಢಗೊಳಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲೇ ಉಡುಪಿ ಜಿಲ್ಲೆ ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿದೆ. ಬಿಜೆಪಿ ಜಿಲ್ಲೆಯ ಐದೂ ಸ್ಥಾನಗಳಲ್ಲಿ ಭರ್ಜರಿ ವಿಜಯ ದಾಖಲಿಸಿದೆ. ಈಗಾಗಲೇ ಕಾರ್ಯಕರ್ತರ ಅಭಿನಂದನಾ ಸಭೆ ಹಾಗೂ ಅವಲೋಕನ ಸಭೆಗಳನ್ನು ನಡೆಸಲಾಗಿದೆ. ಪ್ರಸಕ್ತ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ಸಿನ ಜನ ವಿರೋಧಿ ಸವಾಲುಗಳನ್ನು ಮೆಟ್ಟಿ ನಿಂತು ಪಕ್ಷದ ಮುಂದಿನ ಕಾರ್ಯ ಯೋಜನೆಗಳ ಅನುಷ್ಠಾನದ ಜೊತೆಗೆ ಸಂಘಟಿತ ಪ್ರಯತ್ನದ ಮೂಲಕ ತಾ.ಪಂ., ಜಿ.ಪಂ. ಮತ್ತು ಲೋಕಸಭಾ ಚುನಾವಣೆಯನ್ನು ಸಮರ್ಪಕವಾಗಿ ಎದುರಿಸಲು ಸನ್ನದ್ದರಾಗಬೇಕು ಎಂದರು.
ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಅವಲೋಕನದ ಬಗ್ಗೆ ಜಿಲ್ಲಾ ಕಾರ್ಯ ತಂಡದ ಸದಸ್ಯರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾರ್ಯಕರ್ತರ ಭಾವನೆಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಪ್ರಮುಖರ ಗಮನಕ್ಕೆ ತರಲಾಗುವುದು. ರಾಜ್ಯಕ್ಕೆ ಮಾದರಿಯಾಗಿರುವ ಉಡುಪಿ ಜಿಲ್ಲೆಯ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಶಾಸಕರಾದ ವಿ.ಸುನೀಲ್ ಕುಮಾರ್ ಕಾರ್ಕಳ, ಗುರ್ಮೆ ಸುರೇಶ್ ಶೆಟ್ಟಿ ಕಾಪು, ಗುರುರಾಜ್ ಗಂಟಿಹೊಳಿ ಬೈಂದೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಮನೋಹರ್ ಎಸ್. ಕಲ್ಮಾಡಿ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಹಾಗೂ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News