ಉಡುಪಿ: ಗಾಂಜಾ ಪ್ರಕರಣ; ವಿದ್ಯಾರ್ಥಿ ಸೇರಿದಂತೆ ಮೂವರು ಪೆಡ್ಲರ್ ಗಳು ಅಂದರ್

ಉಡುಪಿ, ಜೂ. 14: ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿ ಸೇರಿದಂತೆ ಮೂರು ಜನ ಗಾಂಜಾ ಪೆಡ್ಲರ್ ಗಳನ್ನು ಪೊಲೀಸರು ಜೂ.14ರ ಬುಧವಾರದಂದು ಬಂಧಿಸಿದ್ದಾರೆ. ಬಂಧಿತರಿಂದ 75 ಸಾವಿರ ಮೌಲ್ಯದ 1.5 ಕೆ.ಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.

ಹೆರ್ಗಾ ಗ್ರಾಮದ ಹೈ-ಪಾಯಿಂಟ್‌ ಹೈಟ್ಸ್ ಅಪಾರ್ಟ್ಮೆಂಟ್‌ ಮೇಲೆ ದಾಳಿ ಮಾಡಿ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದ ಮಣಿಪಾಲದ ಎಂ.ಐ.ಟಿ ವಿದ್ಯಾರ್ಥಿ ಶಶಾಂಕ (೨೫) ಹಾಗೂ ಆತನ ಜೊತೆಯಿದ್ದ ಕಾರ್ಕಳದ ಫೆಡ್ಲರ್‌ ಆದ ಆದಿಲ್‌ (36) ಇವರನ್ನು ವಶಕ್ಕೆ ಪಡೆದು ಸುಮಾರು 300 ಗ್ರಾಂ ಗಾಂಜಾ ವಶಕ್ಕೆಪಡೆಯಲಾಗಿದೆ. ನಂತರ ಆದಿಲ್‌ ನೀಡಿದ ಮಾಹಿತಿಯ ಆಧಾರದ ಮೇಲೆ ಹಿರಿಯಡ್ಕ–ಕಾರ್ಕಳ ರಸ್ತೆಯಲ್ಲಿ ನೌಶದ್‌(27) ಎಂಬಾತನನ್ನು ವಶಕ್ಕೆ ಪಡೆದು ಆತನಿಂದ ಸುಮಾರು 1 ಕೆಜಿ 100 ಗ್ರಾಂ ಗಾಂಜಾವನ್ನು ಉಡುಪಿ ಜಿಲ್ಲಾ ಪೋಲಿಸರು ವಶ ಪಡಿಸಿದ್ದಾರೆ.

ವಿಚಾರಣೆಯಿಂದ ಆದಿಲ್‌ ಮತ್ತು ನೌಶದ್‌ ಎಂಬ ಗಾಂಜಾ ಪೆಡ್ಲರ್‌ಗಳು ಆತನ ಸ್ನೇಹಿತ ಇಮ್ರಾನ್‌ ಖಾನ್‌ ಯಾನೆ ಶಕೀಲ್‌ ಎಂಬುವವನು ಮೂಲತ: ಕಾರ್ಕಳ ನಿವಾಸಿಯಾಗಿದ್ದು, ಪ್ರಸ್ತುತ ಓಮನ್‌ ದೇಶದ ಮಸ್ಕತ್‌ನಲ್ಲಿ ವಾಸವಿದ್ದು ಅಲ್ಲಿಂದ ನೌಶದ್‌ ಮತ್ತು ಆದಿಲ್‌ನನ್ನು ಸಂಪರ್ಕಿಸಿ ಕಾಸರಗೋಡಿನ ಉಪ್ಪಳದಿಂದ ಗಾಂಜಾ ಮಾರಾಟ ಮಾಡುತ್ತಿರುವುದು ತನಿಖೆಯಿಂದ ಕಂಡು ಬಂದಿದೆ.

ಪ್ರಕರಣದ ಮುಖ್ಯ ಆರೋಪಿ ಇಮ್ರಾನ್‌ ಖಾನ್‌ ನ ಪತ್ತಗೆ ಉಡುಪಿ ಎಸ್ ಪಿ ಮತ್ತು ಮಣಿಪಾಲ ಪೊಲೀಸ್‌ ನಿರೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಿ ಆತನ ವಿರುದ್ಧ ಲುಕ್‌ ಔಟ್‌ ನೋಟೀಸ್‌ (ಎಲ್‌ಓಸಿ) ಹೊರಡಿಸಲು ಸೂಚಿಸಿರುತ್ತಾರೆ. ಈ ಪ್ರಕರಣದಲ್ಲಿ ವೇಳೆ ಓರ್ವ ವಿದ್ಯಾರ್ಥಿ ಪೆಡ್ಲರ್‌ ಸೇರಿದಂತೆ ಮೂರು ಜನರನ್ನು ದಸ್ತಗಿರಿ ಮಾಡಿ ಸುಮಾರು 75 ಸಾವಿರ ಮೌಲ್ಯದ 1.5 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಮಾದಕ ವಸ್ತುಗಳ ಜಾಲದ ಬಗ್ಗೆ ತನಿಖೆ ಮುಂದುವರಿಸಲಾಗಿದೆ.

ಒಂದು ವಾರದ ಹಿಂದೆ ಆದಿ ಉಡುಪಿಯ ಸುಮನ್‌ ಶೆಟ್ಟಿಗಾರ್‌(೨೫) ಎಂಬಾತನನ್ನು ಬಂಧಿಸಿ 300 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು . ಮಾದಕ ವಸ್ತುಗಳ ವಿರುದ್ಧ ಸಮರ ಮುಂದುವರೆದಿದ್ದು ,ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಅನೇಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ.

ಈ ಪ್ರಕರಣವನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ್ ಮಚಿಂದ್ರರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ಧಲಿಂಗಪ್ಪರವರು ತಮ್ಮ ತಂಡದ ಸದಸ್ಯರಾದ ದಿನಕರ ಕೆ.ಪಿ, ಡಿ.ವೈ.ಎಸ್.ಪಿ ಉಡುಪಿ , ದೇವರಾಜ ಟಿ.ವಿ ಪೊಲೀಸ್‌ ನಿರೀಕ್ಷಕರು ಮಣಿಪಾಲ ಠಾಣೆ, ಠಾಣಾ ಸಿಬ್ಬಂದಿಗಳಾದ ಎ.ಎಸ್‌.ಐ ಶೈಲೇಶ್‌ ಕುಮಾರ್‌, ಹೆಚ್.ಸಿ. ಸುಕುಮಾರ್ ಶೆಟ್ಟಿ, ಹೆಚ್.ಸಿ. ಅಬ್ದುಲ್‌ ರಜಾಕ್, ಹೆಚ್ ಸಿ ಇಮ್ರಾನ್ , ಪಿ.ಸಿ ಚೆನ್ನೇಶ್ , ಪಿಸಿ ಆನಂದಯ್ಯ ರವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.

You cannot copy content from Baravanige News

Scroll to Top