Wednesday, May 22, 2024
Homeಸುದ್ದಿಕರಾವಳಿಅವೈಜ್ಞಾನಿಕ ಲೇಔಟ್ ನಿರ್ಮಾಣಕ್ಕೆ ಬೃಹತ್ ಬೆಟ್ಟವೇ ಬಲಿ : ಮಡಿಕೇರಿಯಲ್ಲಿ ಭೂ ಕುಸಿತದ ಆತಂಕ

ಅವೈಜ್ಞಾನಿಕ ಲೇಔಟ್ ನಿರ್ಮಾಣಕ್ಕೆ ಬೃಹತ್ ಬೆಟ್ಟವೇ ಬಲಿ : ಮಡಿಕೇರಿಯಲ್ಲಿ ಭೂ ಕುಸಿತದ ಆತಂಕ

ಮಡಿಕೇರಿ: ಅವೈಜ್ಞಾನಿಕ ಲೇಔಟ್ ನಿರ್ಮಾಣಕ್ಕೆ ಬೃಹದಾಕಾರದ ಬೆಟ್ಟವನ್ನೇ ನೆಲಸಮ ಮಾಡಲಾಗಿದ್ದು, ಪರಿಣಾಮ ಮಡಿಕೇರಿಯಲ್ಲಿ ಮತ್ತೆ ಭೂಕುಸಿತದ ಆತಂಕ ಮನೆ ಮಾಡಿದೆ.

ಮಡಿಕೇರಿ ಹೊರ ವಲಯದ ಕರ್ಣಂಗೇರಿ ಗ್ರಾಮದ ಸರ್ವೆ ನಂಬರ್ 543/73 ಮತ್ತು 543/74 ರಲ್ಲಿ ಒಟ್ಟು 38 ಎಕರೆ ಬೆಟ್ಟ ಪ್ರದೇಶವನ್ನು ಅಗೆದು ಸಮತಟ್ಟು ಮಾಡಲಾಗಿದೆ. ಇದರೊಂದಿಗೆ ನೂರಾರು ಮರಗಳನ್ನೂ ಕಡಿದು ಗುರುತೇ ಸಿಗದಂತೆ ಮಾಡಲಾಗಿದೆ. ಇದು ಜನರಲ್ಲಿ ಭೂಕುಸಿತದ ಆತಂಕವನ್ನು ತಂದಿಟ್ಟಿದೆ.

ಇದು ಖಾಸಗಿ ಜಾಗವಾಗಿದ್ದು ಸುಮಾರು 10 ವರ್ಷಗಳ ಹಿಂದೆ ಇಲ್ಲಿ ಸುಮಾರು 80ಕ್ಕೂ ಅಧಿಕ ಎಕರೆ ಜಾಗವನ್ನು ಸ್ಥಳೀಯರು ಆಂಧ್ರ ಮೂಲದ ಉದ್ಯಮಿಗಳಿಗೆ ಮಾರಾಟ ಮಾಡಿದ್ದರು. ಅಪ್ಪಾರಾವ್, ಸುಬ್ಬಯಮ್ಮ ಮತ್ತು ವೇಂಕಟೇಶ್ವರ ರವಿ ರೆಡ್ಡಿ ಎಂಬವರು ಈ ಬೆಟ್ಟದ ಮಾಲೀಕರಾಗಿದ್ದಾರೆ. ಇದರಲ್ಲಿ 38 ಎಕರೆ ಜಾಗದಲ್ಲಿ ಜೆಸಿಬಿ ಬಳಸಿ ಬೆಟ್ಟವನ್ನ ಸಮತಟ್ಟುಗೊಳಿಸಲಾಗುತ್ತಿದೆ. ಅಲ್ಲದೇ ಖಾಸಗಿ ಜಾಗ ಎಂದು ಹೇಳಿಕೊಳ್ಳುವ ಜಾಗದ ಮಾಲೀಕರು ಜಾಗದಲ್ಲಿದ್ದ ನೂರಾರು ಮರಗಳ ಮಾರಣಹೋಮ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಈ ಮರಗಳ ಕಟಾವಿಗೆ ಅರಣ್ಯ ಇಲಾಖೆಯ ಅನುಮತಿಯನ್ನೂ ಪಡೆದಿಲ್ಲ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಾಗದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಫ್‍ಒ ಪೂವಯ್ಯ, ತಮ್ಮ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುಮಾರು 80 ರಿಂದ 100 ಮರಗಳು ನಾಶವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಜಾಗದ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 2018 ಮತ್ತು 2019ರಲ್ಲಿ ಭೀಕರ ಜಲಪ್ರಳಯ ಮತ್ತು ಭೂಕುಸಿತ ಸಂಭವಿಸಿತ್ತು. ಈ ದುರಂತಕ್ಕೆ ಪ್ರಕೃತಿಯ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪವೂ ಒಂದು ಕಾರಣ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು. ಆದರೂ ಈ ಎಚ್ಚರಿಕೆಯ ನಡುವೆ ಜಿಲ್ಲೆಯಲ್ಲಿ ಪ್ರಕೃತಿಯ ಮೇಲೆ ನಿರಂತರ ದಾಳಿ ನಡೆಯುತ್ತಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News