Tuesday, September 10, 2024
Homeಸುದ್ದಿಕರಾವಳಿಉಡುಪಿ, ದ.ಕ.: ಅಗತ್ಯವಿದ್ದಲ್ಲಿ ಅನುದಾನ- ಸಿಎಂ

ಉಡುಪಿ, ದ.ಕ.: ಅಗತ್ಯವಿದ್ದಲ್ಲಿ ಅನುದಾನ- ಸಿಎಂ

ಉಡುಪಿ/ ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಗರ ಮತ್ತು ಗ್ರಾಮೀಣ ಜನತೆಗೆ ಕುಡಿಯುವ ನೀರಿಗೆ ಯಾವುದೇ ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್‌ ನೀರು ಸರಬರಾಜು ಮಾಡಬೇಕು. ಆವಶ್ಯಕತೆಗೆ ತಕ್ಕಂತೆ ಸರಕಾರ ಅನುದಾನ ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವೀಡಿಯೋ ಸಂವಾದದಲ್ಲಿ ತಿಳಿಸಿದ್ದಾರೆ.

ಟ್ಯಾಂಕರ್‌ ಮೂಲಕ ಕುಡಿಯುವ ನೀರಿನ ಪೂರೈಕೆ ಮುಂದುವರಿಸುವಂತೆ ಸೂಚನೆ ನೀಡಿದ ಸಿಎಂ, ಅನುದಾನಕ್ಕೆ ಕೊರತೆ ಇಲ್ಲ. ಜನರಿಗೆ ಯಾವುದೇ ತೊಂದರೆ ಎದುರಾಗದಂತೆ ಎಚ್ಚರ ವಹಿಸಬೇಕು. ಮಳೆ ಸುರಿದಿದೆ ಅಂದ ಮಾತ್ರಕ್ಕೆ ಕುಡಿಯುವ ನೀರು ಒಮ್ಮೆಲೆ ಸಿಗಲು ಸಾಧ್ಯವಿಲ್ಲ . ಹೀಗಾಗಿ ಲಭ್ಯವಿರುವ ನೀರನ್ನು ಬಳಸುವಂತೆ ಸೂಚಿಸಿದರು.


ಉಡುಪಿ ಜಿಲ್ಲೆಯ 58 ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಪ್ರಸ್ತುತ ಹೆಚ್ಚುವರಿಯಾಗಿ ಯಾವ ಗ್ರಾಮಗಳಿಂದಲೂ ನೀರಿನ ಸಮಸ್ಯೆಯ ಬಗ್ಗೆ ದೂರುಗಳು ಬಂದಿಲ್ಲ. ಈ ನಡುವೆ ಮಳೆ ಆರಂಭಗೊಂಡ ಕಾರಣ ಮುಂದಿನ ದಿನದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದು ಎಂದು ಜಿ.ಪಂ. ಸಿಇಒ ಪ್ರಸನ್ನ ಎಚ್‌. ತಿಳಿಸಿದರು

ದ.ಕ ಜಿಲ್ಲೆಯ ಸ್ಥಿತಿಗತಿ ವಿವರಣೆ ನೀಡಿದ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಜಿಲ್ಲೆಯಲ್ಲಿ ಜೂ. 8ರ ಬಳಿಕ ಉತ್ತಮ ಮಳೆಯಾಗುತ್ತಿದೆ. ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 4.6 ಮೀ. ಹಾಗೂ ಎಎಂಆರ್‌ ಡ್ಯಾಂನಲ್ಲಿ 18 ಮೀ.ಗೆ ಏರಿಕೆಯಾಗಿದೆ. ಹಾಗಾಗಿ ನೀರಿಗೆ ಸದ್ಯ ಸಮಸ್ಯೆ ಇಲ್ಲ, ಈಗಾಗಲೇ ಮಂಗಳೂರು ನಗರಕ್ಕೆ ನೀರಿನ ರೇಷನಿಂಗ್‌ ನಿಲ್ಲಿಸಲಾಗಿದೆ. ಎತ್ತರದ ಪ್ರದೇಶಗಳಲ್ಲಿ 13 ಟ್ಯಾಂಕರ್‌ ಮೂಲಕ ನೀರಿನ ವಿತರಣೆ ಮಾಡಲಾಗುತ್ತಿದೆ ಎಂದರು.

ಗ್ರಾಮೀಣ ಭಾಗದ 22 ಗ್ರಾಮಗಳ ಪೈಕಿ 7 ಕಡೆ ಖಾಸಗಿ ಬೋರ್‌ವೆಲ್‌ಗ‌ಳನ್ನು ಪಡೆದುಕೊಂಡು ನೀರು ಪೂರೈಕೆ ಮಾಡಲಾಗುತ್ತಿದೆ, ಉಳಿದ 15 ಕಡೆ ಸರಕಾರದಿಂದ ಸಿಕ್ಕಿರುವ 1 ಕೋಟಿ ರೂ. ಅನುದಾನ ಹಾಗೂ ಜಿಲ್ಲಾಡಳಿತದಿಂದ 30 ಲಕ್ಷ ರೂ. ಸೇರಿಸಿಕೊಂಡು ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ ಎಂದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News