ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಾಗಿದ್ದ ಜೋಡಿ ಬಾತ್ ರೂಂನಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಚಿಕ್ಕಜಾಲದ ತರಬನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆ ತಾಲ್ಲೂಕು ಚಂದ್ರಶೇಖರ್, ಗೋಕಾಕ್ ತಾಲ್ಲೂಕು ಸುಧಾರಾಣಿ ಇಬ್ಬರು ಮದುವೆ ಆಗಲು ನಿಶ್ಚಯಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗಲು ತಯಾರಿ ನಡೆಸಿದ್ದರು. ಆದರೆ ಇಬ್ಬರು ಒಟ್ಟಿಗೆ ಸ್ನಾನಕ್ಕೆ ತೆರಳಿದ್ದು, ಅಲ್ಲೇ ಶವವಾಗಿ ಪತ್ತೆಯಾಗಿದ್ದಾರೆ.
ಇವರ ಸಾವಿಗೆ ಕಾರಣವೇನು..!??
ಚಂದ್ರಶೇಖರ್ ಮತ್ತು ಸುಧಾರಾಣಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಇವರಿಬ್ಬರ ಸಾವು ಎರಡು ದಿನದ ಬಳಿಕ ಬೆಳಕಿಗೆ ಬಂದಿದೆ. ಮನೆಯ ಮಾಲೀಕ ಅನುಮಾನದ ಮೇರೆಗೆ ಪೊಲೀಸರಿಗೆ ವಿಚಾರ ತಿಳಿಸಿ, ಬಳಿಕ ಪೊಲೀಸರು ಬಂದು ಪರಿಶೀಲಿಸಿದಾಗ ಇಬ್ಬರು ಸ್ನಾನಗೃಹದಲ್ಲೇ ಸಾವನ್ನಪ್ಪಿರುವುದು ಗೊತ್ತಾಗಿದೆ.
ಚಂದ್ರಶೇಖರ್ ತರಬನ ಹಳ್ಳಿ ಬಳಿ ಮನೆ ಮಾಡಿಕೊಂಡಿದ್ದ. ಜೂನ್ 10ರಂದು ಸುಧಾರಾಣಿ ಆತನ ಮನೆಗೆ ಬಂದಿದ್ದಾಳೆ. ಈ ವೇಳೆ ಇಬ್ಬರು ಒಟ್ಟಿಗೆ ಸ್ನಾನದ ಗೃಹ ಹೊಕ್ಕಿದ್ದಾರೆ. ಗ್ಯಾಸ್ ಗೀಸರ್ ಆನ್ ಮಾಡಿಕೊಂಡು ಬಾತ್ ರೂಮ್ ಗೆ ತೆರಳಿದ್ದಾರೆ. ಈ ವೇಳೆ ಬಾತ್ ರೂಮ್ ನ ಕಿಟಕಿ ಹಾಗೂ ಬಾಗಿಲು ಸಂಪೂರ್ಣವಾಗಿ ಲಾಕ್ ಮಾಡಿ ಇಬ್ಬರು ಸ್ನಾನ ಮಾಡಿದ್ದಾರೆ. ಆದರೆ ಗ್ಯಾಸ್ ಗೀಸರ್ ನಿಂದ ವಿಷ ಅನಿಲ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಇಬ್ಬರು ಸ್ನಾನ ಮಾಡುತ್ತಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಚಂದ್ರಶೇಖರ್ ಮತ್ತು ಸುಧಾರಾಣಿ ಇಬ್ಬರೂ ನಂದಿಹಿಲ್ಸ್ ಬಳಿಯ ಗಾಲ್ಪ್ ಹೋಟೆಲ್ ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಆದರೆ ಮದುವೆಗೂ ಮುನ್ನವೇ ಮಸಣ ಸೇರಿದ್ದಾರೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.