ಉಡುಪಿ: ಜೂ. 5ರಿಂದ ಮರಳುಗಾರಿಕೆ ನಿಷೇಧ

ಉಡುಪಿ, ಜೂ.03: ಜಿಲ್ಲೆಯಲ್ಲಿ ಮಳೆಗಾಲ ಅವಧಿ ಮೀನು ಮರಿ ಉತ್ಪಾದನೆ ಕಾರಣಕ್ಕೆ ನಾನ್‌ ಸಿಆರ್‌ಝಡ್‌ ಮರಳುಗಾರಿಕೆಗೆ ಜೂ. 5ರಿಂದ ಅಕ್ಟೋಬರ್‌ 15ರ ವರೆಗೆ ನಿಷೇಧ ಇರಲಿದೆ. ಸಿಆರ್‌ಝಡ್‌ ವಲಯದ ಮರಳುಗಾರಿಕೆ ಜೂನ್‌, ಜುಲೈ ಎರಡು ತಿಂಗಳು ನಿರ್ಬಂಧ ಇರಲಿದೆ. ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಮರಳು ತೆಗೆಯಲು ಸುಪ್ರೀಂ ಕೋರ್ಟ್‌ ಆದೇಶವಾದರೂ ಮಳೆಗಾಲ ಮುಗಿಯುವವರೆಗೆ ಕಾಯಬೇಕಿದೆ.

ಸಿಆರ್‌ಝಡ್‌ ಮರಳು ದಿಬ್ಬ ತೆರವಿಗೆ ನಿಷೇಧ ಹೇರಿದ್ದ ರಾಷ್ಟ್ರೀಯ ಹಸುರು ಪ್ರಾಧಿಕಾರದ (ಎನ್‌ಜಿಟಿ) ಆದೇಶದ ವಿರುದ್ಧ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದು, ಮಧ್ಯಾಂತರ ಆದೇಶದ ಮೂಲಕ ಸದ್ಯಕ್ಕೆ ಸಾಂಪ್ರದಾಯಿಕ ಮರಳು ತೆರವಿಗೆ ಅವಕಾಶ ಕಲ್ಪಿಸಲಾಗಿದೆ. ಕೋರ್ಟ್‌ ಆದೇಶವಿದ್ದರೂ ಮರಳು ದಿಬ್ಬ ತೆರವಿಗೆ ನೀಡಿದ ಎಲ್ಲ ಪರವಾನಗಿ ಅವಧಿ 2022ರಲ್ಲಿ ಮುಗಿದಿದೆ. ಇದೀಗ ಮಳೆಗಾಲ ಅವಧಿಯು ಬಂದಿರುವುದರಿಂದ ಸದ್ಯಕ್ಕೆ ಎಲ್ಲ ಬಗೆಯ ಮರಳುಗಾರಿಕೆ ಸ್ಥಗಿತವಾಗಲಿದೆ. ಮಳೆಗಾಲ ಅನಂತರ ಸಿಆರ್‌ಝಡ್‌ ವ್ಯಾಪ್ತಿ ಸಾಂಪ್ರದಾಯಿಕ ಮರಳು ತೆರವಿಗೆ ಪರವಾನಿಗೆ ನೀಡುವ ಪ್ರಕ್ರಿಯೆ ಹೊಸದಾಗಿ ನಡೆಯಬೇಕಾಗಿದೆ

ಮೀನುಗಾರರು ದೋಣಿಗಳ ಸರಾಗ ಸಂಚಾರಕ್ಕೆ ಅಡಚಣೆಯಾಗುವ ಮರಳು ದಿಬ್ಬ ತೆರವಿಗೆ ಮೀನುಗಾರಿಕೆ ಇಲಾಖೆಗೆ ಮನವಿ ನೀಡಿದ ಬಳಿಕ ಸಿಆರ್‌ಝಡ್‌ ಇಲಾಖೆಗೆ ವರದಿ ಸಲ್ಲಿಸಬೇಕು. ಅನಂತರ ಮರಳು ದಿಬ್ಬಗಳನ್ನು ಗುರುತಿಸಿ ಜಿಲ್ಲಾಧಿಕಾರಿ ನೇತೃತ್ವದ ಏಳು ಸದಸ್ಯರ ಸಮಿತಿಯು ಪ್ರಸ್ತಾವನೆಯನ್ನು ಕರ್ನಾಟಕ ಕರಾವಳಿ ವಲಯ ನಿಯಂತ್ರಣ ಪ್ರಾಧಿಕಾರಕ್ಕೆ (ಕೆಸಿಎಂಝಡ್‌) ಸಲ್ಲಿಸಬೇಕು. ಇಲ್ಲಿ ಅನುಮೋದನೆ ಸಿಕ್ಕ ಅನಂತರ ಡಿಸಿ ನೇತೃತ್ವದ 7 ಸದಸ್ಯರ ಸಮಿತಿ ಪರವಾನಿಗೆ ನೀಡುವ ಮೂಲಕ ಮರಳು ದಿಬ್ಬ ತೆರವಿಗೆ ಚಾಲನೆ ನೀಡಲಾಗುತ್ತದೆ.

2022-23ನೇ ಸಾಲಿನಲ್ಲಿ 122 ಪರವಾನಗಿ, 19 ಮರಳು ದಿಬ್ಬದಲ್ಲಿ 1.92 ಲಕ್ಷ ಮೆಟ್ರಿಕ್‌ ಟನ್‌ ಮರಳು ತೆರವು ಮಾಡಲಾಗಿದೆ. 5.97 ಲಕ್ಷ ಮೆ.ಟನ್‌ ಮರಳು ಉಳಿಕೆಯಾಗಿದೆ. ನಾನ್‌ ಸಿಆರ್‌ಝಡ್‌ನ‌ಲ್ಲಿ 1.09 ಲಕ್ಷ ಮೆ. ಟನ್‌ ಮರಳು ತೆರವು ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Scroll to Top