ಐಪಿಎಲ್ ಫೈನಲ್ ಫಿಕ್ಸ್? CSK ರನ್ನರ್ ಅಪ್..?

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಐಪಿಎಲ್ ಫೈನಲ್ ಪಂದ್ಯವನ್ನು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಫೈನಲ್ ಪಂದ್ಯ ಫಿಕ್ಸ್ ಆಗಿದೆಯಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿದ್ದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನ ಬಿಗ್ ಸ್ಕ್ರೀನ್ನಲ್ಲಿ ಕಾಣಿಸಿಕೊಂಡ ಬರಹ.

ಹೌದು, ಭಾನುವಾರ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಆದರೆ ಇದರ ನಡುವೆ ಸ್ಟೇಡಿಯಂನಲ್ಲಿನ ಬಿಗ್ ಸ್ಕ್ರೀನ್ನಲ್ಲಿ ನೀಡಲಾಗುತ್ತಿದ್ದ ಅಪ್ಡೇಟ್ಗಳ ನಡುವೆ ಸಿಎಸ್ಕೆ ತಂಡವು ರನ್ನರ್ ಅಪ್ ಎಂಬ ಬರಹ ಕಾಣಿಸಿಕೊಂಡಿದೆ.

ಇತ್ತ ಟಾಸ್ ಪ್ರಕ್ರಿಯೆಯೇ ನಡೆದಿಲ್ಲ. ಅದಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ರನ್ನರ್ ಅಪ್ ಎಂಬ ಬರಹ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದ್ದು, ಜೊತೆಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಏಕೆಂದರೆ ಪಂದ್ಯ ಶುರುವಾಗುವ ಮುಂಚೆಯೇ ತಂಡವೊಂದನ್ನು ರನ್ನರ್ ಅಪ್ ಎಂದು ನಿರ್ಧರಿಸುವುದು ಹೇಗೆ? ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೆ ಐಪಿಎಲ್ ಫೈನಲ್ ಪಂದ್ಯವು ಈಗಾಗಲೇ ಫಿಕ್ಸ್ ಆಗಿದೆಯಾ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿನ ಬಿಗ್ ಸ್ಕ್ರೀನ್ನಲ್ಲಿ ಕಾಣಿಸಿಕೊಂಡ ಫೋಟೋ ಇದೀಗ ವೈರಲ್ ಆಗಿದ್ದು, ಇದಾಗ್ಯೂ ಸೋಮವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

You cannot copy content from Baravanige News

Scroll to Top