Thursday, May 2, 2024
Homeಸುದ್ದಿಉಡುಪಿ: ಕಡು ಬೇಸಗೆ, ನೀರಿನ ಅಭಾವದ ನಡುವೆಯೂ 3 ಎಕರೆ ಸೌತೆ ಬೆಳೆದು ಅಚ್ಚರಿ ಮೂಡಿಸಿದ...

ಉಡುಪಿ: ಕಡು ಬೇಸಗೆ, ನೀರಿನ ಅಭಾವದ ನಡುವೆಯೂ 3 ಎಕರೆ ಸೌತೆ ಬೆಳೆದು ಅಚ್ಚರಿ ಮೂಡಿಸಿದ ರೈತ

ಉಡುಪಿ, ಮೇ.20: ಜಿಲ್ಲೆಯಲ್ಲಿ ಬಿರು ಬೇಸಿಗೆಯ ಹೊಡೆತ ಜೋರಾಗಿಯೆ ಇದೆ. ಎಲ್ಲೆಲ್ಲಿ ನೋಡಿದರೂ ಕುಡಿಯುವ ನೀರಿಗೂ ಒದ್ದಾಟ ಮಾಡುವ ಪರಿಸ್ಥಿತಿ ಇದೆ. ಆದರೆ ಇಂತಹ ಕಷ್ಟ ಕಾಲದಲ್ಲಿ ಕೃಷಿಯನ್ನು ಇಷ್ಟಪಟ್ಟು ಮಾಡುತ್ತಿರುವ ಉಡುಪಿಯ ರೈತರೋರ್ವರು ಹುಬ್ಬೇರಿಸುವಂತೆ ಮಾಡಿದ್ದಾರೆ. ನೀರಿಲ್ಲದೆ ಮುಂಗಾರಿನ ಆಗಮನಕ್ಕೆ ಕಾಯುತ್ತಿರುವ ಊರಿನಲ್ಲಿ ಬರೋಬ್ಬರಿ ಮೂರು ಎಕರೆ ಸೌತೆ ಬೆಳೆಯುವ ಮೂಲಕ ಈ ಕೃಷಿಕ ಎಲ್ಲರನ್ನು ದಂಗಾಗುವಂತೆ ಮಾಡಿದ್ದಾರೆ.

ಹೌದು ಉಡುಪಿ ಜಿಲ್ಲೆಯ ಕೋಟ ಹೋಬಳಿ ಎಂದರೆ ಅದು ಕೃಷಿ ಕುಟುಂಬಗಳೇ ಅತಿ ಹೆಚ್ಚಾಗಿರುವಂತ ಹೋಬಳಿ. ಇಲ್ಲಿನ ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಳಿಯಾರು ಗ್ರಾಮದ ಹರ್ತಟ್ಟು ಶ್ರೀಧರ ದೇವಾಡಿಗ ಸದ್ಯ ಅಚ್ಚರಿ ಮೂಡಿಸಿದ ಕೃಷಿಕ. ಇಡೀ ಹೋಬಳಿಯಲ್ಲಿ ನೀರಿನ ಅಭಾವ ಕಾಡುತ್ತಿದೆ, ಆದರು ಶ್ರೀಧರ ದೇವಾಡಿಗ ಬಿರು ಬೇಸಿಗೆಯಲ್ಲೂ ಸಮೃದ್ಧವಾಗಿ ಸೌತೆ ಬೆಳೆದು ಅಚ್ಚರಿ ಮೂಡಿದ್ದಾರೆ. ಸಾಮಾನ್ಯವಾಗಿ ಭತ್ತದ ಕಟಾವಿನ ನಂತರ ಭೂಮಿಯ ತೇವಾಂಶ, ಮಣ್ಣಿನ ಫಲವತ್ತತೆಯನ್ನು ಅನುಸರಿಸಿ ಸೌತೆ ಕೃಷಿ ಮಾಡುತ್ತಾರೆ. ಆದರೆ ದೇವಾಡಿಗ ಎರಡು ಎಕರೆ ಕೃಷಿ ಭೂಮಿಯಲ್ಲಿ ಕಲ್ಲಂಗಡಿ, ಹೀರೆಕಾಯಿ, ಅಲಸಂಡೆ ಇನ್ನಿತರ ಬೆಳೆಗಳ ನಡುವೆ ಇದೀಗ ಸೌತೆ ಕೃಷಿ ಮಾಡಿದ್ದಾರೆ.

ಕೋಟದ ಶ್ರೀಧರ ದೇವಾಡಿಗ ಹೈನುಗಾರಿಕೆಯೊಂದಿಗೆ ಎರಡು ಎಕರೆ ಕೃಷಿ ಭೂಮಿಯಲಿ ರಾಸಾಯನಿಕ ಬಳಸದೆ ಹಟ್ಟಿಗೊಬ್ಬರ ಬಳಸಿ ನಾನಾ ರೀತಿಯ ಬೆಳೆ ಬೆಳೆದು ಈ ರೀತಿ ಕೃಷಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. 63ರ ಹರೆಯದ ಶ್ರೀಧರ ದೇವಾಡಿಗ ಅವರು ತಮ್ಮ ಪತ್ನಿ ಸುಜಾತ ಅವರ ಸಹಕಾರದೊಂದಿಗೆ ಯಾಂತ್ರಿಕ ಕೃಷಿ ಮಾಡುತ್ತಾ ಬಂದಿದ್ದಾರೆ. ಕೃಷಿಭೂಮಿಯ ಪಕ್ಕದಲ್ಲಿಯೇ ಹರಿಯುವ ವಾರಾಹಿ ನೀರಿನ ಸದ್ಬಳಕೆ ಮಾಡಿಕೊಂಡು ಕೃಷಿಯಲ್ಲಿ ಶ್ರಮಪಟ್ಟರೆ ಲಾಭದಾಕ ವಾಗಲು ಸಾಧ್ಯವಿದೆ ಎಂಬುವುದನ್ನು ತೊರಿಸಿಕೊಟ್ಟಿದ್ದಾರೆ. ಸಾಮಾನ್ಯವಾಗಿ ಕರಾವಳಿಯ ಮಣ್ಣಿನಲ್ಲಿ ಎರಡು ಬೆಳೆಗಳನ್ನು ವರ್ಷದಲ್ಲಿ ಪಡೆಯಬಹುದಾಗಿದೆ. ಆದರೆ ನೀರಿನ ಸೌಲಭ್ಯ ಬಳಸಿ ನಾಲ್ಕು ಬೆಳೆಗಳನ್ನು ಬೆಳೆಯಲು ಪ್ರಯತ್ನಿಸುತ್ತಿರುವ ಸಿದ್ಧದೇವಾಡಿಗ ಭತ್ತ, ಅಲಸಂಡೆ, ಹೀರೆಕಾಯಿ ಇದೀಗ ಸೌತೆ ಕೃಷಿ ಮಾಡಿ ಹೀಗೂ ಲಾಭದಾಯಕ ಕೃಷಿ ಮಾಡಲು ಸಾಧ್ಯವಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.

ಒಟ್ಟಾರೆಯಾಗಿ ನೀರಿದ್ದು ಫಲವತ್ತಾದ ಕೃಷಿ ಭೂಮಿ ಇದ್ದು ಬಿತ್ತನೆಗೆ ಬೀಜ ಇದ್ದರು ಕೂಡ ಕೃಷಿ ಮಾಡುವ ಮನಸ್ಸು ಮಾಡದೆ ಕುಳಿತುಕೊಳ್ಳುವವರು ಒಂದು ಕಡೆಯಾದರೆ, ಇರುವ ಅಲಭ್ಯತೆಗಳನ್ನೇ ಬಳಸಿಕೊಂಡು ಸಮೃದ್ಧ ಕೃಷಿಯ ಮೂಲಕ ಯುವ ಪೀಳಿಗೆಯನ್ನು ಕೃಷಿಯತ್ತ ಆಕರ್ಷಿಸುತ್ತಿರುವ ಶ್ರೀಧರ ದೇವಾಡಿಗ ಅವರ ಸಾಧನೆಗೆ ಇತರರ ಹುಬ್ಬೇರುವಂತೆ ಮಾಡಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News