ವಿವಾಹ ನಿರಾಕರಿಸಿದ ಯುವತಿಯ ತಲೆಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ..!!

ಜಾರ್ಖಂಡ್, ಮೇ 16: ಜಾರ್ಖಂಡ್‌ ನ ಪಾಲಾಮು ಜಿಲ್ಲೆಯಲ್ಲಿ ತನ್ನ ಒಪ್ಪಿಗೆ ಇಲ್ಲದೇ ಕುಟುಂಬ ಸದಸ್ಯರು ಗೊತ್ತುಪಡಿಸಿದ ಯುವಕನೊಂದಿಗೆ ಮದುವೆ ಧಿಕ್ಕರಿಸಿದ ಯುವತಿಯನ್ನು ಥಳಿಸಿ, ಆಕೆಯ ತಲೆಕೂದಲನ್ನು ಬೋಳಿಸಿ ಮೆರವಣಿಗೆ ಮಾಡಿಸಿರುವ ಘಟನೆ ನಡೆದಿದೆ.

ಯುವತಿಯ ಕೊರಳಿಗೆ ಚಪ್ಪಲಿ ಹಾರ ಹಾಕಿ, ಮೆರವಣಿಗೆ ಮಾಡಿ ಕೊನೆಗೆ ಕಾಡಿನಲ್ಲಿ ಬಿಡಲಾಗಿತ್ತು ಎಂದು ವರದಿ ತಿಳಿಸಿದೆ.

ಇನ್ನು ಈ ಬಗ್ಗೆ ದೂರು ಸ್ವೀಕರಿಸಿದ ಪೊಲೀಸರು, ಸ್ಥಳಕ್ಕೆ ಆಗಮಿಸಿ ಕಾಡಿನಲ್ಲಿದ್ದ ಯುವತಿಯನ್ನು ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ದೇಹದ ತುಂಬಾ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಈ ಯುವತಿಗೆ ಪೋಷಕರಿಲ್ಲ, ಆಕೆಯ ಮೂವರು ಸಹೋದರಿಯರಿಗೆ ವಿವಾಹವಾಗಿದ್ದು, ಒಬ್ಬ ವಿಕಲಾಂಗ ಸಹೋದರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾನೆ. ಈಕೆಯ ಒಬ್ಬ ಸಹೋದರಿ ಲಾಟೇಹರ್‌ ಜಿಲ್ಲೆಯ ಯುವಕನ ಜತೆ ವಿವಾಹ ಮಾಡಿಸುವ ಸಿದ್ಧತೆ ನಡೆಸಿದ್ದಳು. ಆದರೆ ಯುವತಿ ಆತನನ್ನು ವಿವಾಹವಾಗಲು ನಿರಾಕರಿಸಿದ್ದಳು. ಆದರೆ ಈ ಪ್ರಕರಣ ಊರ ಪಂಚಾಯ್ತಿ ಕಟ್ಟೆ ಏರಿ ಅಲ್ಲಿ ಹಿರಿಯರು ಯುವಕನ ಜತೆ ವಿವಾಹವಾಗುವಂತೆ ಯುವತಿಗೆ ಕಟ್ಟಪ್ಪಣೆ ಹೊರಡಿಸಿದ್ದರು. ಆದರೆ ಆಕೆ ವಿವಾಹವಾಗಲು ಒಪ್ಪದ ಕಾರಣ ಥಳಿಸಿ, ತಲೆಕೂದಲು ಬೋಳಿಸಿ ಮೆರವಣಿಗೆ ಮಾಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

You cannot copy content from Baravanige News

Scroll to Top