ಭಜರಂಗದಳ ನಿಷೇಧಿಸುವ ಭರವಸೆ: ಕಾಂಗ್ರೆಸ್ ಪ್ರಣಾಳಿಕೆಗೆ ಶೋಭಾ ಕರಂದ್ಲಾಜೆ ಕೆಂಡಾಮಂಡಲ

ಬೆಂಗಳೂರು: ನಿಮಗೆ ತಾಕತ್‌ ಇದ್ರೆ ಭಜರಂಗದಳ ನಿಷೇಧ ಮಾಡಿ ನೋಡಿ ಎಂದು ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತು. ಅದರಲ್ಲಿ ಭಜರಂಗದಳ ನಿಷೇಧಿಸುವ ಕುರಿತು ಪ್ರಸ್ತಾಪಿಸಿತ್ತು. ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಶೋಭಾ ಕರಂದ್ಲಾಜೆ ಕೆಂಡಾಮಂಡಲರಾಗಿದ್ದಾರೆ.

ವಿನಾಶಕಾಲ ವಿಪರೀತ ಬುದ್ಧಿ ಅನ್ನುವಂತೆ ಇದೆ ಕಾಂಗ್ರೆಸ್ ನಡೆ. ಕಾಂಗ್ರೆಸ್‌ನ ವಿನಾಶ ಕಾಲ‌ ಸಮೀಪಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಪಿಎಫ್ಐ ನಿಷೇಧ ಮಾಡಿದೆ. ಇವತ್ತು ಕಾಂಗ್ರೆಸ್‌ನವರು ಪಿಎಫ್ಐ ನಿಷೇಧ ಮಾಡ್ತೀವಿ. ಜತೆಗೆ ಭಜರಂಗದಳ ನಿಷೇಧ ಮಾಡ್ತೀವಿ ಎಂದಿದ್ದಾರೆ. ಕಾಂಗ್ರೆಸ್‌ನವರ ಟಾರ್ಗೆಟ್ ಇರೋದು ಪಿಎಫ್ಐ ಅಲ್ಲ, ಅವರ ಟಾರ್ಗೆಟ್ ಭಜರಂಗದಳ ಎಂದು ವಾಗ್ದಾಳಿ ನಡೆಸಿದ್ದಾರೆ.

ಆರ್‌ಎಸ್ಎಸ್‌ನ ಒಂದು ಭಾಗ ಬಿಜೆಪಿ. ಆರ್‌ಎಸ್ಎಸ್‌ನ ಯುವಕರ ದಳ ಭಜರಂಗದಳ. ಇವತ್ತು ಭಜರಂಗದಳ ಮತ್ತು ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟಿದೆ ಕಾಂಗ್ರೆಸ್. ದೇಶದ್ರೋಹಿ ಪಿಎಫ್ಐ ಜತೆ ದೇಶಪ್ರೇಮಿ ಭಜರಂಗದಳ ಹೋಲಿಸಿರೋದು ಸರಿಯಲ್ಲ. ನಿಮಗೆ ತಾಕತ್ ಇದ್ದರೆ ಭಜರಂಗದಳ ನಿಷೇಧ ಮಾಡಿ ನೋಡಿ ಎಂದು ಸವಾಲು ಹಾಕಿದ್ದಾರೆ. ನಾನೂ ಭಜರಂಗದಳದ ಕಾರ್ಯಕರ್ತೆ. ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ ಎಂದು ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಗುಡುಗಿದ್ದಾರೆ.

You cannot copy content from Baravanige News

Scroll to Top