Saturday, April 20, 2024
Homeಸುದ್ದಿಕರಾವಳಿಜಗನ್ಮಾತೆ, ಜಗತ್ ಜನನಿ ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಾರಂಭ

ಜಗನ್ಮಾತೆ, ಜಗತ್ ಜನನಿ ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಾರಂಭ

ಉಡುಪಿ: ಜಗನ್ಮಾತೆ, ಜಗತ್ ಜನನಿ, ನಾರಾಯಣಿ ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಪ್ರಾರಂಭವಾಗಿದೆ.

ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಂತಹ ಶಕ್ತಿ ಪೀಠ ಇದಾಗಿದ್ದು ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂಜಾ ವಿಧಿ ವಿಧಾನಗಳು ನಿನ್ನೆ ಅಂದರೆ 30 ಏಪ್ರಿಲ್ 2023ರ ಬೆಳಗ್ಗೆ ದೇವಸ್ಥಾನದ ಮುಂಭಾಗದಲ್ಲಿರುವ ಕಂಬದ ಗಣಪತಿಗೆ ಪ್ರಾರ್ಥನೆ ಮತ್ತು ಗಣ ಹೋಮವನ್ನ ನಡೆಸುವುದರ ಮೂಲಕ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂಜಾ ಕೈಂಕರ್ಯಗಳನ್ನ ಪ್ರಾರಂಭಿಸಲಾಯ್ತು.

ಬಿಳಿ ಹಾಗೂ ಗುಲಾಬಿ ಬಣ್ಣದ ಸೇವಂತಿಗೆ, ಕಮಲ‌, ಅರಶಿನ ಬಣ್ಣದ ಚೆಂಡು ಹೂವಿನಿಂದ ಕಂಬದ ಗಣಪತಿಯನ್ನ ಅಲಂಕರಿಸಲಾಯ್ತು. ಜೊತೆಗೆ ದಿನನಿತ್ಯ ನಡೆಸುವಂತಹ ಬಲಿ ಉತ್ಸವದ ದೃಶ್ಯಾವಳಿಗಳೂ ಕಂಡು ಬಂತು. ಉಡುಪಿಯ ಶ್ರೀ ಮೂಕಾಂಬಿಕಾ ಭಜನಾ ಮಂದಿರ ಸಮಿತಿ ವತಿಯಿಂದ ಬಂದಂತಹ ಮೊದಲ ಹೊರಕಾಣಿಕೆಯನ್ನ ಸ್ವೀಕರಿಸಿಕೊಂಡ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಹೊರೆಕಾಣಿಕೆ ಪೂಜೆಯನ್ನ ನೆರವೇರಿಸಿದ್ರು. ಹೊರೆಕಾಣಿಕೆ ನೀಡಿದ ಭಕ್ತರನ್ನು ದೇವಸ್ಥಾನದ ವತಿಯಿಂದ ಸ್ವಾಗತಿಸಲಾಯ್ತು. ಜೊತೆಗೆ ಅವರಿಗೆ ಶಾಲು ಪ್ರಸಾದ ಹಾಗೂ ಮೂಕಾಂಬಿಕಾ ಅನುಗ್ರಹ ಪತ್ರ ನೀಡಿ ಗೌರವಿಸಲಾಯ್ತು. ಹೊರ ಕಾಣಿಕೆ ಉಗ್ರಾಣದಲ್ಲಿ ಇಂದು ಬೆಳಗ್ಗೆ ಅರ್ಚಕರು ಪೂಜಾ ವಿಧಿ ವಿಧಾನವನ್ನ ನೆರವೇರಿಸಿ ಅಷ್ಟಬಂಧ ಹೊರೆಕಾಣಿಕೆ ಉಗ್ರಾಣದ ಉದ್ಘಾಟನೆಯನ್ನ ವಿಧ್ಯುಕ್ತವಾಗಿ ನೆರವೇರಿಸಿದ್ರು. ಹೊರೆಕಾಣಿಕೆಯಲ್ಲಿ ಸ್ವೀಕರಿಸಿದಂತಹ ಸಾಮಾಗ್ರಿಗಳನ್ನು ಅಷ್ಟಬಂಧದ ಧಾರ್ಮಿಕ ಕಾರ್ಯಕ್ರಮಗಳು ಮತ್ತು ದೇವಸ್ಥಾನದ ಪ್ರಸಾದವನ್ನ ನೀಡೋದಕ್ಕಾಗಿ ಬಳಕೆ‌ ಮಾಡಲಾಗುವುದು.

ಜೊತೆಗೆ ರಾತ್ರಿ ವೇಳೆ ಯಾಗಶಾಲಾ ಪ್ರವೇಶ, ಮಂಟಪ ಸಂಸ್ಕಾರ, ವಾಸ್ತುಹೋಮ, ರಾಕ್ಷೋಘ್ನಹೋಮ, ಕಲಶಸ್ಥಾಪನೆ, ಅಸ್ತ್ರಯಾಗ, ಅಗ್ನಿಜನನ ಅಧಿವಾಸಹೋಮಗಳನ್ನ ನೆರವೇರಿಸಲಾಗುತ್ತೆ.

ಅಷ್ಟಬಂಧ ಬ್ರಹ್ಮಕಲಶೋತ್ಸವದ ಮೊದಲ ದಿನದ ಪೂಜಾ ಕೈಂಕರ್ಯಗಳು ಇಂದಿನಿಂದ ಪ್ರಾರಂಭವಾಗಿದ್ದು, ಮೂಕಾಂಬಿಕೆಯ ಕೃಪೆಗೆ ಪಾತ್ರರಾಗಲು ಇದು ಭಕ್ತಾದಿಗಳ ಪಾಲಿಗೆ ಒದಗಿ ಬಂದಂತಹ ಸೌಭಾಗವೇ ಸರಿ. ಅಷ್ಟಬಂಧ ಬ್ರಹ್ಮಕಲಶೋತ್ಸವದ ಜೊತೆ ಜೊತೆಗೆ ದೇವಸ್ಥಾನದಲ್ಲಿ ಮೇ. 11 ನೇ ತಾರೀಕಿನವರೆಗೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳೂ ನಡೆಯಲಿವೆ.

ಪ್ರಮುಖವಾಗಿ ಮೇ. 4ನೇ ತಾರೀಕಿನಂದು ಸಹಸ್ರ ಕಲಶಸ್ಥಾಪನೆ
ಮೇ.5 ರಂದು ಸಹಸ್ರ ಕಲಶದೊಂದಿಗೆ ಬ್ರಹ್ಮ ಕಲಶಾಭಿಷೇಕ
ಮೇ. 6 ಮತ್ತು 7ರಂದು ಸಂಗೀತ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು
ಹಾಗೂ ಮೇ 9 ನೇ ತಾರೀಕಿನಂದು ಮನ್ಮಹಾ ರಥೋತ್ಸವ ಜರುಗಲಿದೆ.


ಭಕ್ತಾದಿಗಳೆಲ್ಲರೂ ಆಗಮಿಸಿ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿ ಪ್ರಸಾದವನ್ನ ಸ್ವೀಕರಿಸಿ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ ಶೆಟ್ಟಿಯವರು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News