Thursday, April 25, 2024
Homeಸುದ್ದಿಉಡುಪಿಯ ಎಲ್ಲಾ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಹೋರಾಟ; ವಶಕ್ಕೆ ಪಡೆಯಲು ಕೈ ಕಾದಾಟ ; ಯಾರ...

ಉಡುಪಿಯ ಎಲ್ಲಾ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಹೋರಾಟ; ವಶಕ್ಕೆ ಪಡೆಯಲು ಕೈ ಕಾದಾಟ ; ಯಾರ ಪರವಾಗಲಿದೆ ಅಂತಿಮ ಆಟ..!!!??

ಉಡುಪಿ ಜಿಲ್ಲೆಯ ಕುಂದಾಪುರ, ಕಾಪು, ಉಡುಪಿ ಹಾಗೂ ಬೈಂದೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆಯಿದ್ದು, ಕಾರ್ಕಳದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಈ ಬಾರಿ ಜಿಲ್ಲೆಯಲ್ಲಿ ಎರಡೂ ಪಕ್ಷಗಳು ಹೊಸ ಮುಖಗಳಿಗೆ ಆದ್ಯತೆ ನೀಡಿವೆ. ಕಾರ್ಕಳದಲ್ಲಿ ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್‌ ನೀಡಿದ್ದರೆ ಕಾಂಗ್ರೆಸ್‌ ಹೊಸ ಮುಖವನ್ನು ಪರಿಚಯಿಸಿದೆ. ಬೈಂದೂರು ಮತ್ತು ಕಾಪುವಿನಲ್ಲಿ ಕಾಂಗ್ರೆಸ್‌ ಮಾಜಿ ಶಾಸಕರಿಗೆ ಟಿಕೆಟ್‌ ನೀಡಿದ್ದರೆ ಬಿಜೆಪಿ ಹೊಸಬರನ್ನು ಕಣಕ್ಕೆ ಇಳಿಸಿದೆ. ಉಡುಪಿ ಮತ್ತು ಕುಂದಾಪುರದಲ್ಲಿ ಎರಡೂ ಪಕ್ಷದಿಂದ ಹೊಸ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲೆಯ ಯಾವ ಕ್ಷೇತ್ರದಲ್ಲೂ ಬಂಡಾಯ, ಅಸಮಾಧಾನದ ಹೊಗೆಯಿಲ್ಲ.

ಉಡುಪಿ
ಹಾಲಿ ಶಾಸಕ ರಘುಪತಿ ಭಟ್‌ ಬದಲಿಗೆ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಎ. ಸುವರ್ಣ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದರೆ, ಕಾಂಗ್ರೆಸ್‌ ಪಕ್ಷದಿಂದ ಜಿಲ್ಲಾ ಉಪಾಧ್ಯಕ್ಷ ಹಾಗೂ ಉದ್ಯಮಿ ಪ್ರಸಾದ್‌ ರಾಜ್‌ ಕಾಂಚನ್‌ ಅವರಿಗೆ ಟಿಕೆಟ್‌ ನೀಡಿದೆ. ಈ ಕ್ಷೇತ್ರದಲ್ಲಿ 1952ರಲ್ಲಿ ಟಿ.ಎ. ಪೈ, 1957ರಲ್ಲಿ ಉಪೇಂದ್ರ ನಾಯಕ್‌ ಶಾಸಕರಾಗಿದ್ದರು. ಅನಂತರ ಚುನಾವಣೆಗಳಲ್ಲಿ ಮೊಗವೀರ ಮತ್ತು ಬ್ರಾಹ್ಮಣ ಸಮುದಾಯದವರೇ ಶಾಸಕರಾಗಿದ್ದರು. 1952ರಿಂದ ಈಚೆಗೆ ಕಾಂಗ್ರೆಸ್‌ ಮೊಗವೀರ ಸಮುದಾಯದವರಿಗೆ ಈ ಕ್ಷೇತ್ರದ ಟಿಕೆಟ್‌ ಮೀಸಲಿಟ್ಟುಕೊಂಡು ಬಂದಿದ್ದು, ಪ್ರಸಕ್ತ ಚುನಾವಣೆಯಲ್ಲೂ ಅದನ್ನು ಮುಂದುವರಿಸಿದೆ. ಬಿಜೆಪಿ ಈ ಬಾರಿ ಮೊಗವೀರ ಸಮುದಾಯಕ್ಕೆ ಟಿಕೆಟ್‌ ನೀಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆಯಲಿದೆ. ಕ್ಷೇತ್ರದಲ್ಲಿ ಹಾಲಿ ಶಾಸಕರು ಪಕ್ಷದ ಅಭ್ಯರ್ಥಿಗೆ ಬೆಂಬಲವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಲ್ಲವ, ಬಂಟ, ಮೊಗವೀರ, ಅಲ್ಪಸಂಖಾಕರ ಮತಗಳು ಹೆಚ್ಚಿವೆ.

ಕಾಪು
ಮಾಜಿ ಸಚಿವ ವಿನಯ ಕುಮಾರ್‌ ಸೊರಕೆಯವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದರೆ, ಹಾಲಿ ಶಾಸಕ ಲಾಲಾಜಿ ಮೆಂಡನ್‌ ಅವರನ್ನು ಬದಲಾಯಿಸಿ ಸಮಾಜ ಸೇವಕ ಹಾಗೂ ರಾಜ್ಯ ಕಾರ್ಯಕಾರಣಿ ಸದಸ್ಯ ಗುರ್ಮೆ ಸುರೇಶ್‌ ಶೆಟ್ಟಿಯವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. 1972ರಿಂದ 1999ರ ವರೆಗೂ ಈ ಕ್ಷೇತ್ರ ಕಾಂಗ್ರೆಸ್‌ ಹಿಡಿತದಲ್ಲಿತ್ತು. ಅನಂತರ ಬಿಜೆಪಿ ತೆಕ್ಕೆಗೆ ಬಂದಿದ್ದರೂ 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪುನರ್‌ ವಶಪಡಿಸಿಕೊಂಡಿತು. 2018ರಲ್ಲಿ ಬಿಜೆಪಿ ಮರಳಿ ಜಯ ಸಾಧಿಸಿತು. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆಯಿದೆ. ಎರಡೂ ಪಕ್ಷಗಳಿಂದಲೂ ಬಿರುಸಿನ ಪ್ರಚಾರ ನಡೆಯುತ್ತಿದೆ. ನೀರಿನ ಸಮಸ್ಯೆ ಹಾಗೂ ರಾಷ್ಟ್ರೀಯ ವಿಚಾರಗಳೇ ಇಲ್ಲಿ ಪ್ರಚಾರ ಅಸ್ತ್ರ. ಎರಡು ಪಕ್ಷದ ರಾಷ್ಟ್ರೀಯ ನಾಯಕರು ಈ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರಕ್ಕೆ ಇಳಿದಿರುವುದು ವಿಶೇಷ. ಬಿಲ್ಲವ ಮತ್ತು ಮೊಗವೀರ ಮತಗಳೇ ಇಲ್ಲಿ ನಿರ್ಣಾಯಕ. ಹಾಗೆಂದು ಅಲ್ಪಸಂಖ್ಯಾಕರು ಹಾಗೂ ಬಂಟ ಸಮುದಾಯದ ಮತಗಳನ್ನು ಅವಗಣಿಸುವಂತಿಲ್ಲ.

ಕುಂದಾಪುರ
ಜಿಲ್ಲೆಯ ವಿಶಿಷ್ಟ ರಾಜಕೀಯ ಹಿನ್ನೆಲೆ ಹೊಂದಿರುವ ಕ್ಷೇತ್ರವಿದು. ಅಲ್ಪಸಂಖ್ಯಾಕ ಮಹಿಳೆ ವಿನ್ನಿಫ್ರೆಡ್‌ ಫೆರ್ನಾಂಡಿಸ್‌ 1967 ಹಾಗೂ 1972ರಲ್ಲಿ ಕ್ಷೇತ್ರದ ಶಾಸಕಿಯಾಗಿದ್ದರು. ಉಳಿದಂತೆ 1957ರಿಂದ 2018ರ ವರೆಗೂ ಬಂಟ ಸಮುದಾಯದವರೇ ಶಾಸಕರಾಗಿದ್ದರು. ಕಾಂಗ್ರೆಸ್‌ನಿಂದ ಕೆ. ಪ್ರತಾಪ್‌ಚಂದ್ರ ಶೆಟ್ಟಿ (ಮಾಜಿ ಸಭಾಪತಿ) ನಾಲ್ಕು ಬಾರಿ, ಬಿಜೆಪಿಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಐದು ಬಾರಿ ಶಾಸಕರಾಗಿದ್ದರು. ಈ ಬಾರಿ ಬಿಜೆಪಿ ಇಲ್ಲಿ ಜಾತಿ ಲೆಕ್ಕಾಚಾರವನ್ನು ಬದಲಾಯಿಸಿದೆ. ಹೊಸ ಮುಖ ಕಿರಣ್‌ ಕುಮಾರ್‌ ಕೊಡ್ಗಿಯವರನ್ನು ಬಿಜೆಪಿ ಕಣಕ್ಕೆ ಇಳಿಸಿದ್ದರೆ, ಕಾಂಗ್ರೆಸ್‌ ಕೂಡ ಗುತ್ತಿಗೆದಾರ ದಿನೇಶ ಹೆಗ್ಡೆ ಮೊಳಹಳ್ಳಿಯವರಿಗೆ ಟಿಕೆಟ್‌ ನೀಡಿದೆ. ಎರಡೂ ಪಕ್ಷದಿಂದಲೂ ಹೊಸಬರಿಗೆ ಟಿಕೆಟ್‌ ನೀಡಿದ್ದರೂ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಕಾಣಬಹುದಾಗಿದೆ. ಬಿಜೆಪಿಗೆ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಬಲವಿದೆ. ಕಾಂಗ್ರೆಸ್‌ ಕೂಡ ಪ್ರಚಾರದಲ್ಲಿ ಸಕ್ರಿಯವಾಗಿದೆ ಮತ್ತು ಮಾಜಿ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿಯವರ ಪ್ರಭಾವವೂ ಇದೆ. ಬಂಟ ಸಮುದಾಯದ ಮತಗಳೇ ಇಲ್ಲಿ ನಿರ್ಣಾಯಕವಾದರೂ ಬಿಲ್ಲವ, ಮೊಗವೀರ ಸಮುದಾಯವರು ಹೆಚ್ಚಿದ್ದಾರೆ. ಬಿಜೆಪಿ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದರಿಂದ ಉಡುಪಿ, ಕಾಪು ಕ್ಷೇತ್ರದಲ್ಲೂ ಜಾತಿ ಲೆಕ್ಕಾಚಾರ ಬದಲಾಗಿದೆ.

ಬೈಂದೂರು
ಟಿಕೆಟ್‌ ಘೋಷಣೆಯ ಅನಂತರದಲ್ಲಿ ರಾಜ್ಯದಲ್ಲೇ ಹೆಚ್ಚು ಸದ್ದು ಮಾಡಿದ ಕ್ಷೇತ್ರವಿದು. ಇಲ್ಲಿನ ಬಿಜೆಪಿ ಅಭ್ಯರ್ಥಿ ಆರೆಸ್ಸೆಸ್‌ನ ಪ್ರಚಾರಕರಾಗಿದ್ದ, ಸಾಮಾನ್ಯ ಕಾರ್ಯಕರ್ತ ಗುರುರಾಜ ಗಂಟಿಹೊಳೆಯವರಿಗೆ ಟಿಕೆಟ್‌ ನೀಡಿದ್ದು ರಾಜ್ಯವ್ಯಾಪಿ ಸುದ್ದಿಯಾಗಿದ್ದು ಮಾತ್ರವಲ್ಲ, ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರಿಗೆ ಟಿಕೆಟ್‌ ನೀಡಲಾಗಿದೆ. ನಾಲ್ಕು ಬಾರಿ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪ್ರಬಲ ಹೋರಾಟವನ್ನು ಇಲ್ಲಿ ಕಾಣಬಹುದಾಗಿದೆ. ಬಿಜೆಪಿ ಅಭ್ಯರ್ಥಿಗೆ ಸಂಘದ ಬಲವಿದ್ದರೆ, ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ ಜಿ.ಪಂ.ಮಾಜಿ ಸದಸ್ಯರು ಕಾಂಗ್ರೆಸ್‌ಗೆ ಇನ್ನಷ್ಟು ಶಕ್ತಿ ನೀಡಬಹುದೆಂಬ ಲೆಕ್ಕಾಚಾರ ನಡೆದಿದೆ. ಶಾಸಕ ಸುಕುಮಾರ ಶೆಟ್ಟಿ ಪಕ್ಷದಲ್ಲಿ ತಟಸ್ಥವಾಗಿದ್ದಾರೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಇದು ಬರುವುದರಿಂದ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಭಾವ ಕ್ಷೇತ್ರದಲ್ಲಿ ಹೆಚ್ಚಿದೆ. ಬಿಲ್ಲವ, ಬಂಟ, ಮೊಗವೀರ ಮತ್ತು ಪರಿಶಿಷ್ಟ ಜಾತಿ, ಪಂಗಡದ ಮತದಾರರು ಹೆಚ್ಚಿದ್ದಾರೆ.

ಕಾರ್ಕಳ
ಹಾಲಿ ಶಾಸಕ ಹಾಗೂ ಸಚಿವ ಸುನಿಲ್‌ ಕುಮಾರ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದರೆ, ಕಾಂಗ್ರೆಸ್‌ನಿಂದ ಗುತ್ತಿಗೆದಾರರಾದ ಉದಯ ಶೆಟ್ಟಿಯವರನ್ನು ಕಣಕ್ಕೆ ಇಳಿಸಲಾಗಿದೆ. ಇನ್ನು ಪಕ್ಷೇತರರಾಗಿ ಕಣದಲ್ಲಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಕೂಡ ಸದ್ದು ಮಾಡುತ್ತಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಘೋಷಣೆಗೂ ಮೊದಲು ಈ ಕ್ಷೇತ್ರದಲ್ಲಿ ಹಿಂದುತ್ವ ವರ್ಸಸ್‌ ಹಿಂದುತ್ವ ಎಂಬಂತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಲಿ ಈ ಕ್ಷೇತ್ರದಿಂದ 6 ಬಾರಿ ಶಾಸಕರಾಗಿದ್ದರು. 1967ರಲ್ಲಿ ಜನಸಂಘ ಇಲ್ಲಿ ಖಾತೆ ತೆರೆದಿದ್ದರೂ ಬಹುಕಾಲ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಸುನಿಲ್‌ ಕುಮಾರ್‌ ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದ್ದರೆ, ಕಾಂಗ್ರೆಸ್‌ ಕ್ಷೇತ್ರವನ್ನು ಪುನರ್‌ ವಶಕ್ಕೆ ಪಡೆಯುವ ತವಕದಲ್ಲಿದೆ. ಪಕ್ಷೇತರ ಅಭ್ಯರ್ಥಿ ಕೂಡ ಬಿಜೆಪಿ ಮತಬುಟ್ಟಿಗೆ ಕೈ ಹಾಕಿದ್ದಾರೆ. ರಾಷ್ಟ್ರೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ. ಬಂಟ ಹಾಗೂ ಬಿಲ್ಲವರ ಮತಗಳೇ ಇಲ್ಲಿ ನಿರ್ಣಾಯಕ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News