Wednesday, April 24, 2024
Homeಸುದ್ದಿಉಡುಪಿ: ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

ಉಡುಪಿ: ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

ಉಡುಪಿ, ಏ 26: ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಯುವಕನೋರ್ವನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ತನ್ನ ಮಗನನ್ನು ಕಳೆದುಕೊಂಡ ನೋವಿನ ಮಧ್ಯೆಯೂ ಕೂಡಾ ಯುವಕನ ಪೋಷಕರು ಅಂಗಾಂಗ ದಾನಕ್ಕೆ ಮುಂದಾಗಿರುವ ಘಟನೆ ಸಮಾಜಕ್ಕೊಂದು ಪ್ರೇರಣೆಯಾಗಿದೆ.

ಭದ್ರಾವತಿ ನಿವಾಸಿಯಾಗಿರುವ 21 ವರ್ಷದ ಯುವಕ ಉಲ್ಲಾಸ್ ಆರ್. ಎಂಬವರೇ ಅಂಗಾಂಗ ದಾನದ ಮೂಲಕ ಏಳು ಮಂದಿಯ ಜೀವನಕ್ಕೆ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ. ಯುವಕನಿಗೆ ಭದ್ರಾವತಿ ತಾಲೂಕಿನ ಚೆನ್ನಗಿರಿ ರಸ್ತೆಯಲ್ಲಿ ಏ. 22ರಂದು ಮದ್ಯಾಹ್ನ ಸುಮಾರು 3 ಗಂಟೆ ವೇಳೆಗೆ ರಸ್ತೆ ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏ. 23ರಂದು ಬೆಳಿಗ್ಗೆ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಉಲ್ಲಾಸ್ ನನ್ನು ರಕ್ಷಿಸುವುದಕ್ಕಾಗಿ ಶತ ಪ್ರಯತ್ನವನ್ನು ಮಾಡಿದ ಬಳಿಕವೂ ಕೂಡಾ ಚೇತರಿಸಿಕೊಳ್ಳದ ಕಾರಣದಿಂದಾಗಿ ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಅನುಸಾರ ಶ್ರೀ ಉಲ್ಲಾಸ್ ಅವರನ್ನು ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು. ಮೊದಲನೆ ಪರಿಶೀಲನೆಯನ್ನು ಏ. 24ರಂದು ರಾತ್ರಿ ಮತ್ತು ಎರಡನೆ ಪರಿಶೀಲನೆಯನ್ನು ಏ. 25ರಂದು ಮುಂಜಾನೆ ವೇಳೆ ನಡೆಸಲಾಗಿತ್ತು ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ತಮ್ಮ ಮಗನ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಅರಿತ ಯುವಕನ ತಂದೆ ರಾಜಪ್ಪ ಮತ್ತು ಅವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡುವುದಕ್ಕೆ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಇನ್ನು, ಯುವಕನಿಂದ ದಾನ ಮಾಡಿದ ಹೃದಯ , ಶ್ವಾಸಕೋಶಗಳು, ಮೂತ್ರಪಿಂಡಗಳು, ಯಕೃತ್ತು ಮತ್ತು ಎರಡು ಕಾರ್ನಿಯಾಗಳು 7 ಜನರ ಜೀವ ಉಳಿಸಲು ಸಹಾಯವಾಗಿದೆ.
ಜೀವನ ಸಾರ್ಥಕತೆ ಪ್ರೋಟೋಕಾಲ್ ಗಳು ಮತ್ತು ನಿರ್ಧಾರಗಳ ಪ್ರಕಾರ, ಶ್ವಾಸಕೋಶಗಳನ್ನು ಅಪೊಲೊ ಆಸ್ಪತ್ರೆ ಚೆನ್ನೈ, ಯಕೃತ್ ಅನ್ನು ಅಸ್ಟರ್ ಸಿಎಂಐ ಆಸ್ಪತ್ರೆ ಬೆಂಗಳೂರು, ಒಂದು ಮೂತ್ರಪಿಂಡವನ್ನು ಎಜೆ ಆಸ್ಪತ್ರೆ ಮಂಗಳೂರು ಮತ್ತು ಎರಡು ಕಾರ್ನಿಯಾಗಳು ಹಾಗೂ ಒಂದು ಮೂತ್ರಪಿಂಡವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು.

ಮಗ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ :
“ಅಂಗದಾನ ಒಂದು ಪುಣ್ಯದ ಕೆಲಸ. ನನ್ನ ಮಗ ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ” ಎಂದು ಮೃತ ಯುವಕನ ತಂದೆ ನೋವಿನ ನಡುವಲ್ಲೂ ಕೂಡಾ ತನ್ನ ಮಗನ ಬದುಕಿನ ಸಾರ್ಥಕತೆಯನ್ನು ನೆನೆದು ಭಾವುಕರಾದರು.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಮಾಹಿತಿ ನೀಡಿ, “ಶ್ರೀ ಉಲ್ಲಾಸ್ ಆರ್ ಕುಟುಂಬದ ಈ ಉದಾತ್ತ ನಿರ್ಧಾರವು ಜನರ ಬದಲಾಗುತ್ತಿರುವ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಸ್ವಾಗತಾರ್ಹ ಬದಲಾವಣೆಯಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ, ಇನ್ನಷ್ಟು ಜನರು ಅನುಕರಿಸುವ ಅಗತ್ಯವಿದೆ” ಎಂದರು. ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News