ಉಡುಪಿ: ನಿಟ್ಟೂರಿನಲ್ಲಿ ಅಗ್ನಿ ಅವಘಢ; ಎಕರೆಗಟ್ಟಲೆ ಪ್ರದೇಶ, ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿ

ಉಡುಪಿ, ಏ 25: ನಗರದ ಹೊರವಲಯವಾಗಿರುವ ನಿಟ್ಟೂರಿನ ಗದ್ದೆ ಪ್ರದೇಶದಲ್ಲಿ ಇಂದು ಮಧ್ಯಾಹ್ನ ವೇಳೆ ಭಾರೀ ಬೆಂಕಿ ಕಾಣಸಿಕೊಂಡಿದ್ದು, ಇದರಿಂದ ಎಕರೆಗಟ್ಟಲೆ ಪ್ರದೇಶ ಹಾಗೂ ಹಲವು ಪ್ರಾಣಿ ಪಕ್ಷಿಗಳು ಬೆಂಕಿಗೆ ಆಹುತಿಯಾಗಿರುವ ಬಗ್ಗೆ ವರದಿಯಾಗಿದೆ.

ಮಧ್ಯಾಹ್ನ 2ಗಂಟೆಯ ಸುಮಾರಿಗೆ ನಿಟ್ಟೂರಿನ ಬಾಳಿಗಾ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆ ಬೆಂಕಿ ಇಡೀ ಗದ್ದೆ ಹಾಗೂ ಬಿದಿರು, ಪೊದೆಗಳಿಗೆ ಹಬ್ಬಿಕೊಂಡು ಎಕರೆಗಟ್ಟಲೆ ಪ್ರದೇಶವನ್ನು ವ್ಯಾಪಿಸಿದೆ. ಇದರಿಂದ ನವಿಲು, ಆಮೆ, ಮುಂಗುಸಿ, ಹಾವು ಸೇರಿದಂತೆ ಹಲವು ಪ್ರಾಣಿಗಳು ಬೆಂಕಿಗೆ ಬಲಿಯಾಗಿವೆ. ಯಾವುದೇ ಮನೆಗಳಿಗೆ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಡುಪಿ ಹಾಗೂ ಮಲ್ಪೆ ಅಗ್ನಿಶಾಮಕ ದಳದ ಎರಡು ವಾಹನ ಮತ್ತು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉಡುಪಿ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಮುಹಮ್ಮದ್ ಗೌಸ್ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.

ಈ ಮಧ್ಯೆ ಇರುವ ಮನೆಗಳ ಸುತ್ತಮುತ್ತ ನೀರು ಸಿಂಪಡಿಸಿ ಮುಂಜಾಗ್ರತೆ ಕ್ರಮ ವಹಿಸಲಾಗಿದೆ. ಇದರಿಂದ ಇಡೀ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿದ್ದು, ಈ ಹೊಗೆಯು ಗಾಳಿಯಿಂದ ಉಡುಪಿ ನಗರಕ್ಕೂ ವ್ಯಾಪಿಸಿರುವುದು ಕಂಡುಬಂದಿದೆ.

You cannot copy content from Baravanige News

Scroll to Top