ಉಡುಪಿ: ಕುಡಿದ ಮತ್ತಿನಲ್ಲಿ ಪಂಚ್‌ನಿಂದ ಹೊಡೆದು ಮೀನುಗಾರನ ಹತ್ಯೆ

ಉಡುಪಿ, ಏ.21: ಉದ್ಯಾವರ ಪಿತ್ರೋಡಿ ಬಾರ್ ಸಮೀಪ ಗುರುವಾರ ರಾತ್ರಿ ಮೀನುಗಾರನೋರ್ವನನ್ನು ಪಂಚ್‌ನಿಂದ ಹೊಡೆದು ‌ಹತ್ಯೆಗೈದ ಘಟನೆ ನಡೆದಿದೆ.

ಪಿತ್ರೋಡಿ ನಿವಾಸಿ, ಸಹೋದರನ ಬೋಟ್ ನಲ್ಲಿ ತಾಂಡೇಲ ವೃತ್ತಿ ನಿರ್ವಹಿಸುತ್ತಿರುವ ದಯಾನಂದ ಸಾಲಿಯಾನ್(48) ಕೊಲೆಗೀಡಾದವರು.

ಇವರು ನಿನ್ನೆ ರಾತ್ರಿ ಪಿತ್ರೋಡಿಯ ಬಾರ್‌ನಲ್ಲಿ ಮದ್ಯ ಸೇವಿಸುತ್ತ ಇದ್ದಾಗ ಹತ್ತಿರ ಕುಳಿತಿದ್ದ ಫಿಶ್ ಮಿಲ್ ಕಾರ್ಮಿಕ, ಸ್ಥಳೀಯ ನಿವಾಸಿ ಭರತ್ ಜೊತೆ ಯಾವುದೋ ವಿಷಯದ ಬಗ್ಗೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.

ಬಳಿಕ ಬಾರ್‌ನಿಂದ ಹೊರ ಬಂದು ಇವರಿಬ್ಬರ ನಡುವೆ ಗಲಾಟೆ ನಡೆದಿದೆ. ಸಿಟ್ಟಿನಲ್ಲಿ ಭರತ್ ತನ್ನ ಪಂಚ್ ನಿಂದ ದಯಾನಂದ ಅವರ ಮುಖಕ್ಕೆ ಹೊಡೆದಿದ್ದಾನೆ. ಇದರಿಂದಾಗಿ ನೆಲಕ್ಕುರುಳಿದಾಗ ಬಳಿಕ ಭರತ್ ಅಲ್ಲಿಂದ ಓಡಿ ಹೋಗಿದ್ದಾನೆ.

ದಯಾನಂದ ಅವರು ಬಿದ್ದಿರುವುದನ್ನು ಸ್ಥಳೀಯ ಭಜನ ಮಂಗಳ ತಂಡವು ನೋಡಿ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿತಾದರೂ ದಯಾನಂದ ಆದಾಗಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಭರತ್ ವಿರುದ್ದ ಈಗಾಗಲೇ ಹಲವಾರು ಗಾಂಜಾ ಸೇವನೆಗೈದ ದೂರು ಕಾಪು ಠಾಣೆಯಲ್ಲಿ ಇದ್ದು, ಇದೇ ನಶೆಯಲ್ಲಿ ಹೊಡೆದು ಹತ್ಯೆಗೈದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಪು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿ ಭರತ್‌ನನ್ನು ಇಂದು ಮುಂಜಾನೆ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

You cannot copy content from Baravanige News

Scroll to Top