ಬೈಂದೂರು – ಕೋಸಳ್ಳಿ ಫಾಲ್ಸ್ ನಲ್ಲಿ ನೀರಿಗಿಳಿದ ಕಾಲೇಜು ವಿದ್ಯಾರ್ಥಿ ನಾಪತ್ತೆ…!!

ಕುಂದಾಪುರ (ಎ.08) : ಕೋಸಳ್ಳಿ ಫಾಲ್ಸ್ ನಲ್ಲಿ ಈಜಲು ತೆರಳಿದ್ದ ವಿಧ್ಯಾರ್ಥಿಯೊರ್ವ ನಾಪತ್ತೆಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ನಾಪತ್ತೆಯಾದ ವಿದ್ಯಾರ್ಥಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್.ಐ ಕುಮಾರ ಶೆಟ್ಟಿ ಎಂಬವರ ಪುತ್ರ ಚಿರಾಂತ್ ಶೆಟ್ಟಿ(20) ಎಂದು ಗುರುತಿಸಲಾಗಿದೆ.

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಕಲಿಯುತ್ತಿದ್ದು, ಎಪ್ರಿಲ್ 7ರಂದು ಗುಡ್ ಫ್ರೈಡೇ ಪ್ರಯುಕ್ತ ಕಾಲೇಜಿಗೆ ರಜೆ ಇದ್ದ ಕಾರಣ ಚಿರಾಂತ್ ತನ್ನ ಸಹಪಾಠಿ ಮಿತ್ರರಾದ ಬೈಂದೂರಿನ ಕಿರ್ತನ್ ದೇವಾಡಿಗ (20), ಅಕ್ಷಯ್ ಆಚಾರ್ (20) ಎಂಬವರ ಮನೆಗೆ ತನ್ನ ಇನ್ನೂ ಮೂವರು ಗೆಳೆಯರೊಂದಿಗೆ ಗುರುವಾರ ರಾತ್ರಿ ತೆರಳಿದ್ದರು.

ಅಕ್ಷಯ್ ಆಚಾರ್ ಮನೆಯಲ್ಲಿ ಉಳಿದುಕೊಂಡಿದ್ದ ಇವರು ಶುಕ್ರವಾರ ಅಪರಾಹ್ನ ಕೊಸಳ್ಳಿ ಪಾಲ್ಸ್ ಗೆ ತೆರಳಿದ್ದರು. ಈ ವೇಳೆ ಈಜು ಬರುತ್ತಿದ್ದ ಚಿರಾಂತ್ ಶೆಟ್ಟಿ ಮಾತ್ರ ನೀರಿಗಿಳಿದಿದ್ದರೆನ್ನಲಾಗಿದೆ. ಉಳಿದವರು ದಡದಲ್ಲಿ ಕುಳಿತಿದ್ದರೆನ್ನಲಾಗಿದೆ.

ನೀರಿಗಿಳಿದ ಚಿರಾಂತ್ ಮುಳುಗಿ ನಾಪತ್ತೆಯಾಗಿದ್ದು, ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ, ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

You cannot copy content from Baravanige News

Scroll to Top