ಉಡುಪಿ: ಕೋಟ ಡಾ. ಶಿವರಾಮ ಕಾರಂತರ ಆಪ್ತ ಸಹಾಯಕಿ ಮಾಲಿನಿ ಮಲ್ಯ ನಿಧನ

ಉಡುಪಿ, ಮಾ 29: ಕೋಟ ಡಾ. ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಅಧ್ಯಕ್ಷೆಯಾಗಿದ್ದ ಮಾಲಿನಿ ಮಲ್ಯ ಬೆಂಗಳೂರು ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾಗಿದ್ದಾರೆ.

ದೀರ್ಘ ಕಾಲದಿಂದಲೂ ಪಾರ್ಕಿನ್ಸನ್ ರೋಗದಿಂದ ಬಳಲುತ್ತಿದ್ದ ಅವರನ್ನು ಸಾಲಿಗ್ರಾಮದಿಂದ ಇತ್ತೀಚಿಗಷ್ಟೆ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ಸಾಲಿಗ್ರಾಮದಲ್ಲಿ ಕಾರಂತ ಸ್ಮೃತಿ ಭವನ ನಿರ್ಮಿಸಿ ಕಾರಂತ ಕಾರ್ಯಕ್ರಮ ಆಯೋಜನೆ‌ ಮಾಡುತ್ತಿದ್ದರು.

ಶಿವರಾಮ ಕಾರಂತರ ಕೊನೆಯ ದಿನಗಳವರೆಗೆ ಜೊತೆಗಿದ್ದ ಆಪ್ತ ಸಹಾಯಕಿ ಮಾಲಿನಿ ಮಲ್ಯ ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿದವರು. ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದ್ದಾರೆ.

ಸ್ವತಃ ಕಾದಂಬರಿಗಾರ್ತಿಯಾಗಿರುವ ಮಾಲಿನಿ ಮಲ್ಯ ಮೂಲತಃ ಉಡುಪಿಯವರು. ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಉದ್ಯೋಗಿ. ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರು ಕಾದಂಬರಿ), ಶಿವರಾಮ ಕಾರಂತರ ಕಿನ್ನರ ಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ, ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ಲೋಕ, ಬಾಲ ಪ್ರಪಂಚ-3 ಅವರು ರಚಿಸಿದ ಕೃತಿಗಳು. ಬೆಂಗಳೂರಿನ ಶಾಶ್ವತಿ ಸಂಸ್ಥೆಯಿಂದ ಸದೋದಿತ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

You cannot copy content from Baravanige News

Scroll to Top