ಸಕ್ರಿಯ ರಾಜಕಾರಣಕ್ಕೆ ದಿ.ಸುಷ್ಮಾ ಸ್ವರಾಜ್ ಪುತ್ರಿ ಎಂಟ್ರಿ..!!

ನವದೆಹಲಿ (ಮಾ 27): ಭಾರತೀಯ ಜನತಾ ಪಕ್ಷದ (ಬಿಜೆಪಿ) ಫೈರ್ ಬ್ರ್ಯಾಂಡ್ ನಾಯಕಿ ಎಂದೇ ಖ್ಯಾತಿ ಗಳಿಸಿದ್ದ ದಿ.ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಈಗ ಸಕ್ರಿಯ ರಾಜಕಾರಣಕ್ಕೆ ಕಾಲಿರಿಸಿದ್ದಾರೆ. ಅವರು ದೆಹಲಿಯ ಬಿಜೆಪಿ ಕಾನೂನು ಘಟಕದ ಸಹ ಸಂಚಾಲಕರಾಗಿ ನೇಮಕಗೊಂಡಿದ್ದಾರೆ.

ಬಾನ್ಸುರಿ ಸ್ವರಾಜ್​ ವಕೀಲೆಯಾಗಿದ್ದು, ಅವರು ಸುಪ್ರೀಂಕೋರ್ಟ್​​ನಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಅವರನ್ನು ಬಿಜೆಪಿಯ ದೆಹಲಿ ಅಧ್ಯಕ್ಷ ವೀರೇಂದ್ರ ಸಚ್​ದೇವಾ ಅವರು ಕಾನೂನು ಘಟಕದ ಸಹ ಸಂಚಾಲಕಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಬಾನ್ಸುರಿ ಅವರು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಸ್ವರಾಜ್ ಕೌಶಲ್ ಅವರ ಏಕೈಕ ಪುತ್ರಿಯಾಗಿದ್ದು. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಬಾನ್ಸುರಿ ಸ್ವರಾಜ್ 2024ರ ಲೋಕಸಭೆ ಚುನಾವಣೆ ಅಥವಾ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಲೆಕ್ಕಚಾರ ಹಾಕಲಾಗುತ್ತಿದೆ.

ತಮ್ಮ ನೇಮಕಾತಿ ಪತ್ರವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡ ಬಾನ್ಸುರಿ ಸ್ವರಾಜ್​ ಅವರು “ಭಾರತೀಯ ಜನತಾ ಪಾರ್ಟಿ ದೆಹಲಿಯ ರಾಜ್ಯ ಕಾನೂನು ಘಟಕದ ಸಹ-ಸಂಚಾಲಕಿಯಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ, ಜೆಪಿ ನಡ್ಡಾ, ಬಿಎಲ್​ ಸಂತೋಷ್, ವಿರೇಂದ್ರ ಸಚ್​ದೇವಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಮತ್ತು ಪಕ್ಷಕ್ಕೆ ನನ್ನ ಕೃತಜ್ಞತೆಗಳು” ಎಂದು ಹೇಳಿದ್ದಾರೆ.

You cannot copy content from Baravanige News

Scroll to Top