ಹೋಟೆಲ್ ನಲ್ಲಿ ‘ಲೇಟ್ ನೈಟ್ ಲೇಡಿಸ್ ಪಾರ್ಟಿ’; ಬಜರಂಗದಳ ಕಾರ್ಯಕರ್ತರಿಂದ ತಡೆ

ಶಿವಮೊಗ್ಗ (ಮಾರ್ಚ್ 18): ನಗರದಲ್ಲಿ ಶುಕ್ರವಾರ ಸಂಜೆ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ‘ಲೇಟ್ ನೈಟ್ ಲೇಡಿಸ್ ಪಾರ್ಟಿ’ಯನ್ನು ಬಜರಂಗದಳದ ಕಾರ್ಯಕರ್ತರು ತಡೆದ ಘಟನೆ ಶುಕ್ರವಾರ ನಡೆದಿದೆ.

ಕುವೆಂಪು ರಸ್ತೆಯಲ್ಲಿರುವ ಹೋಟೆಲ್ನಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ಭಜರಂಗದಳ ಕಾರ್ಯಕರ್ತರು ಲೇಟ್ ನೈಟ್ ಪಾರ್ಟಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದರು.

ಬಜರಂಗದಳದ ಕಾರ್ಯಕರ್ತರು ಪಾರ್ಟಿಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಮಹಿಳೆಯರು, ಪುರುಷರು ಮತ್ತು ಕೆಲವು ಮಕ್ಕಳು ಸೇರಿದಂತೆ ಹಲವರು ಹೋಟೆಲ್ ನಿಂದ ಹೊರಗೆ ಬರುತ್ತಿರುವುದು ಕಂಡುಬಂದಿತು. ತಡರಾತ್ರಿ ಪಾರ್ಟಿ ಆಯೋಜಿಸಲಾಗಿದೆ ಎಂದು ಬಜರಂಗದಳದ ಮುಖಂಡ ರಾಜೇಶ್ ಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಮಹಿಳೆಯರ ಲೇಟ್ ನೈಟ್ ಪಾರ್ಟಿ ನಡೆಯಲಿರುವ ಬಗ್ಗೆ ವಾರದ ಹಿಂದೆಯೇ ಪೊಲೀಸರ ಗಮನಕ್ಕೆ ತಂದಿದ್ದೆವು. ಮಲೆನಾಡು ಭಾಗದಲ್ಲಿ ಇಂತಹ ಪಾರ್ಟಿಗಳನ್ನು ಆಯೋಜಿಸಬಾರದು. ಆದರೆ, ಆಕ್ಷೇಪದ ನಡುವೆಯೂ ಪಾರ್ಟಿ ಆಯೋಜಿಸಲಾಗಿತ್ತು. ನಾವು ಪೊಲೀಸರೊಂದಿಗೆ ಹೋಗಿ ಪಾರ್ಟಿಯನ್ನು ನಿಲ್ಲಿಸಿದೆವು. ಅಲ್ಲಿ ಪಬ್ನಂತಹ ವಾತಾವರಣ ಇತ್ತು ” ಎಂದು ರಾಜೇಶ್ ಗೌಡ ಹೇಳಿದ್ದಾರೆ.

You cannot copy content from Baravanige News

Scroll to Top