ಪತ್ನಿ ತಡವಾಗಿ ಏಳುತ್ತಾಳೆ : ಪತಿಯಿಂದ ಪೊಲೀಸರಿಗೆ ದೂರು

ಬೆಂಗಳೂರು: ಪತ್ನಿ ಬೆಳಗ್ಗೆ ತಡವಾಗಿ ಏಳುತ್ತಾಳೆ ಎಂದು ಪತಿಯೊಬ್ಬ ತನ್ನ ಪತ್ನಿ ವಿರುದ್ಧ ವಿಚಿತ್ರ ದೂರನ್ನು ನೀಡಿದ ಪ್ರಕರಣ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಕಮ್ರಾನ್ ಖಾನ್ ಎಂಬಾತ ತನ್ನ ಪತ್ನಿ ಆಯೇಷಾ ಕಳೆದ ಐದು ವರ್ಷಗಳಿಂದಲೂ ನನಗೆ ಹಿಂಸೆ ನೀಡುತಿದ್ದಾಳೆ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.

ರಾತ್ರಿ ಮಲಗಿದರೆ ಮಧ್ಯಾಹ್ನ 12:30ಕ್ಕೆ ಏಳುತ್ತಾಳೆ. ಮತ್ತೆ ಸಂಜೆ 5:30ಕ್ಕೆ ಮಲಗಿ ರಾತ್ರಿ 9:30ರ ತನಕ ನಿದ್ರೆ ಮಾಡುತ್ತಾಳೆ. ಅಡುಗೆ ಕೂಡ ಮಾಡುವುದಿಲ್ಲ. ನನ್ನ ತಾಯಿಗೆ ಅನಾರೋಗ್ಯವಿದೆ, ಆದರೂ ತಾಯಿಯೇ ಮನೆಯಲ್ಲಿ ಅಡುಗೆ ಮಾಡಬೇಕು. ಪ್ರಶ್ನೆ ಮಾಡಿದರೆ ಬೆದರಿಕೆ ಹಾಕುತ್ತಾಳೆ. ತವರು ಮನೆಯವರನ್ನು ಕರೆಸಿ ಗಲಾಟೆ ಮಾಡುತ್ತಾಳೆ ಎಂದು ಎಂದು ಪತಿ ಆರೋಪಿಸಿದ್ದಾನೆ.

ಹುಟ್ಟು ಹಬ್ಬಕ್ಕೆ 25 ಜನರನ್ನ ಮನೆಗೆ ಆಹ್ವಾನಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾಳೆ. ಅವಳಿಗೆ ನನ್ನ ಮೇಲೆ ಪ್ರೀತಿ ಇಲ್ಲ. ತನ್ನ ಆಸ್ತಿ ಲಪಟಾಯಿಸಲು ಹಾಗೂ ರಾಯಲ್ ಲೈಫ್ ಅನುಭವಿಸಲು ನನ್ನನ್ನು ಮದುವೆಯಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.

ಪತ್ನಿಗೆ ಮದುವೆ ಮುಂಚೆಯೇ ಖಾಯಿಲೆಗಳಿದ್ದವು. ಅದನ್ನು ಮರೆಮಾಚಿ ಮದುವೆ ಮಾಡಿಸಿದ್ದಾರೆ. ಪತ್ನಿಯಿಂದ ಹಾಗೂ ಆಕೆಯ ಕುಟುಂಬದಿಂದ ನರಕಯಾತನೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.

You cannot copy content from Baravanige News

Scroll to Top