ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಧೂಮಪಾನ; ಯುವತಿಯ ಬಂಧನ…!!

ಬೆಂಗಳೂರು: ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಭಾನುವಾರ ತಡರಾತ್ರಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಸೀಲ್ದಾ ಜಿಲ್ಲೆಯ ಪ್ರಿಯಾಂಕಾ ಚಕ್ರವರ್ತಿ(24) ಬಂಧಿತ ಆರೋಪಿಯಾಗಿದ್ದಾಳೆ.

ಭಾನುವಾರ ತಡರಾತ್ರಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನ ಸಂಖ್ಯೆ 6E 716 ರ ಶೌಚಾಲಯದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾರೆ.

ವಿಮಾನವು ಕೋಲ್ಕತ್ತಾದಿಂದ ರಾತ್ರಿ 9.50 ಕ್ಕೆ ಹೊರಟು ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರು ತಲುಪಿದೆ. ವಿಮಾನ ಲ್ಯಾಂಡ್‌ ಆಗುವ 30 ನಿಮಿಷ ಮೊದಲು ಪ್ರಿಯಾಂಕಾ ಧೂಮಪಾನ ಮಾಡಿಲು ಶೌಚಾಲಯಕ್ಕೆ ತೆರಳಿದ್ದರು. ಈ ವೇಳೆ ಅನುಮಾನ ಬಂದು ಬಾಗಿಲು ತೆರೆಯುವಂತೆ ಕೇಳಿದಾಗ ಡಸ್ಟ್‌ಬಿನ್‌ನಲ್ಲಿ ಸಿಗರೇಟ್ ಪತ್ತೆಯಾಗಿದೆ. ಸಿಬ್ಬಂದಿ ತಕ್ಷಣ ಸುರಕ್ಷಾ ಕ್ರಮ ಕೈಗೊಂಡಿದ್ದು, ಬಳಿಕ ವಿಮಾನದ ಕ್ಯಾಪ್ಟನ್, ಪ್ರಿಯಾಂಕಾ ಅವರನ್ನು ಅಶಿಸ್ತಿನ ಪ್ರಯಾಣಿಕ ಎಂದು ಘೋಷಿಸಿದ್ದಾರೆ.

ವಿಮಾನ ಲ್ಯಾಂಡ್ ಆದ ಕೂಡಲೇ ಸಿಬ್ಬಂದಿ ಪ್ರಿಯಾಂಕಾ ಅವರನ್ನು ವಿಮಾನ ನಿಲ್ದಾಣದ ಭದ್ರತಾ ವಿಭಾಗಕ್ಕೆ ಒಪ್ಪಿಸಿದ್ದು,ಇಂಟರ್‌ಗ್ಲೋಬ್ ಏವಿಯೇಷನ್‌ನ ಭದ್ರತಾ ವಿಭಾಗದ ಸಹಾಯಕ ವ್ಯವಸ್ಥಾಪಕ ಶಂಕರ್ ಕೆ ನಂತರ ಆಕೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು ಪೊಲೀಸರು ಪ್ರಿಯಾಂಕಾ ಅವರನ್ನು ಬಂಧಿಸಿದ್ದಾರೆ.

You cannot copy content from Baravanige News

Scroll to Top