Home ಸುದ್ದಿ ಕರಾವಳಿ ಇದು ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ- ವಿನಯಕುಮಾರ್‌ ಸೊರಕೆ

ಇದು ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ- ವಿನಯಕುಮಾರ್‌ ಸೊರಕೆ

ಉದ್ಯಾವರ: ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನಸೇವೆಯನ್ನು ಮಾಡಿದ್ದೇನೆ. ಅಧಿಕಾರ ಇದ್ದ ಅಥವಾ ಅಧಿಕಾರ ಇಲ್ಲದ ಸಮಯದಲ್ಲೂ ಜನರೊಂದಿಗೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅಧಿಕಾರ ಇದ್ದಂಥ ಸಮಯದಲ್ಲಿ
ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಪ್ರಸ್ತುತ
ಚುನಾವಣೆ ನಾನು ಎದುರಿಸುತ್ತಿರುವ ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯಾಗಲಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಯಾವರದಲ್ಲಿ ಮಾತನಾಡಿದಾಗ ತಿಳಿಸಿದರು.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಂಗ್ರೆಸ್
ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಾದರೂ, ಜನರು ಮತ್ತು ಕಾರ್ಯಕರ್ತರು ನನ್ನನ್ನು ಯಾವತ್ತೂ ಕೈ ಬಿಡಲಿಲ್ಲ. ಕ್ಷೇತ್ರದ ಮತದಾರರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ನನ್ನ ಮೇಲೆ ಇಟ್ಟ ನಂಬಿಕೆಗೆ ಯಾವುದೇ ಚ್ಯುತಿ ಬಾರದಂತೆ ಕೆಲಸ ಮಾಡಿದ್ದೇನೆ.

ಪ್ರಸ್ತುತ ನಾನು ಮಾಜಿ ಶಾಸಕನಾದರೂ ಪ್ರತಿದಿನ ಜನರು ನನ್ನ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳನ್ನು ನನ್ನ ಬಳಿ ತಿಳಿಸುತ್ತಿದ್ದಾರೆ ಮತ್ತು ಅದಕ್ಕೆ ನಾನು ಸ್ಪಂದಿಸುತ್ತಿದ್ದೇನೆ. ಹಿಂದುತ್ವದ ಹೆಸರೇಳಿ ಅಧಿಕಾರ ಪಡೆದಂತ ಬಿಜೆಪಿ ನಾಯಕರು ರಾಜ್ಯದ ವಿವಿಧ ದೇವಸ್ಥಾನಗಳನ್ನು ಕೆಡವಲು ಪ್ರಯತ್ನಿಸಿದರು. ನಂಜನಗೂಡಿನಲ್ಲಿ ಇತಿಹಾಸ ಪ್ರಸಿದ್ಧ ದೇವಸ್ಥಾನ ಕೆಡವಿದ ಬಳಿಕ ಜನರ ಪ್ರತಿಭಟನೆಗೆ ಹೆದರಿ ತನ್ನ ನಿರ್ಧಾರದಿಂದ ಬಿಜೆಪಿ ಹಿಂದಕ್ಕೆ ಸರಿದಿತ್ತು ಎಂದರು.

ನನ್ನ ಅಧಿಕಾರದ ಸಮಯದಲ್ಲಿ ವಿವಿಧ ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಸರಕಾರದಿಂದ ದೊರಕುವ ಅನುದಾನ ಮತ್ತು ನನ್ನ ವೈಯುಕ್ತಿಕ ಸಹಾಯವನ್ನು ಮಾಡಿದ್ದೇನೆ. ಯಾವುದೇ ಸಂದರ್ಭದಲ್ಲಿ ನಾನು ರಾಜಕೀಯ ಮಾಡಿಲ್ಲ. ಕಳೆದ ಚುನಾವಣೆಯಲ್ಲಿ ನನಗೆ ಸೋಲಾದರೂ, ಮನೆಯಲ್ಲಿ ಕುಳಿತುಕೊಳ್ಳದೆ ಜನರೊಂದಿಗೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನವನ್ನು ನಿಷ್ಠೆಯಿಂದ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಆದ ಯೋಜನೆಗಳನ್ನು ಪ್ರಸ್ತುತ ಬಿಜೆಪಿ ಶಾಸಕರು ಉದ್ಘಾಟನೆ ಮಾಡುತ್ತಿದ್ದಾರೆ. ಅದೇ ಅವರ ಸಾಧನೆ.

ಪ್ರಸ್ತುತ ರಾಜ್ಯದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಸ್ಪಷ್ಟವಾಗಿದೆ. ಅಧಿಕಾರ ಇರಲಿ ಅಧಿಕಾರ ಇಲ್ಲದಿರಲಿ, ಜಾತಿ ಧರ್ಮವನ್ನು ನೋಡಿಲ್ಲ. ಪಕ್ಷಾತೀತವಾಗಿ ಕಾಪು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೋರಾಟ
ಮಾಡಿದ್ದೇನೆ ಮತ್ತು ಜನರ ಸಹಕಾರದಿಂದ ಯಶಸ್ವಿಯಾಗಿದ್ದೇನೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಮುಂದೆ ನಡೆಯುವ ವಿಧಾನಸಭಾ ಚುನಾವಣೆಯು ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ. ಕಪ್ಪು ಚುಕ್ಕೆ ಇಲ್ಲದ ನನ್ನ ರಾಜಕೀಯ ಜೀವನದ ಈ ಚುನಾವಣೆಗೆ ಮತದಾರರು ಆಶೀರ್ವದಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನ್ನಲ್ಲಿದೆ ಎಂದು ವಿನಯ್ ಕುಮಾರ್ ಸೊರಕೆ ತಿಳಿಸಿದರು.

Translate »

You cannot copy content from Baravanige News