Friday, March 29, 2024
Homeಸುದ್ದಿರಾಜ್ಯಆನ್‌ಲೈನ್ ಬೆಟ್ಟಿಂಗ್ ಗೀಳು; ಕುಟುಂಬದ 7 ಎಕರೆ ಜಮೀನು ಮಾರಿದ ಯುವಕ

ಆನ್‌ಲೈನ್ ಬೆಟ್ಟಿಂಗ್ ಗೀಳು; ಕುಟುಂಬದ 7 ಎಕರೆ ಜಮೀನು ಮಾರಿದ ಯುವಕ

ವಿಜಯವಾಡ: ಆನ್‌ಲೈನ್ ಬೆಟ್ಟಿಂಗ್ ಗೀಳಿನಲ್ಲಿ ಸಿಲುಕಿಕೊಂಡ ಯುವಕನೊಬ್ಬ ತನ್ನ ಕುಟುಂಬಕ್ಕೆ ಸೇರಿದ ಏಳು ಎಕರೆ ಜಮೀನು ಮಾರಾಟ ಮಾಡಿ ರಾಜ್ಯ ಬಿಟ್ಟು ಪರಾರಿಯಾದ ಘಟನೆ ವಿಜಯವಾಡದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಮೆಲಿಯಪುಟ್ಟಿ ಮಂಡಲದ ನಿವಾಸಿ ಸಿರಿಗಿಡಿ ಪ್ರವೀಣ್​ ಎಂಬಾತನೇ ಜಮೀನು ಮಾರಿ ಪರಾರಿಯಾದ ಯುವಕ. ಆನ್‌ಲೈನ್ ಬೆಟ್ಟಿಂಗ್ ಗೀಳು ಹಚ್ಚಿಸಿಕೊಂಡಿದ್ದ ಈತ ಈ ಕಾರಣಕ್ಕಾಗಿ ಬಂಧಿಸಲ್ಪಟ್ಟು ಬಳಿಕ ಬಿಡುಗಡೆಗೊಂಡಿದ್ದ. ಆದರೆ ಕಳೆದ ಐದು ವರ್ಷಗಳಲ್ಲಿ ಫೇಸ್ಬುಕ್, ಟ್ವಿಟರ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂನಲ್ಲಿ ಸಾಲ, ಉದ್ಯೋಗ, ಹೂಡಿಕೆ ಲಾಭದ ಹೆಸರಿನಲ್ಲಿ ಹಲವರಿಂದ ಹಣ ವಸೂಲಿ ಮಾಡಿ ವಂಚಿಸಿದ್ದ. ನಕಲಿ ಬೆಟ್ಟಿಂಗ್ ಸೈಟ್‌ಗಳ ಮೂಲಕವೂ ವಂಚನೆ ಎಸಗಿದ್ದಾನೆ. ಇದೇ ಗೀಳಿನಲ್ಲಿ ಪ್ರಸ್ತುತ ತನ್ನ ಕುಟುಂಬಕ್ಕೆ ಸೇರಿದ ಏಳು ಎಕರೆ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದಾನೆ.

ಈತನ ವಿರುದ್ದ ತೆಲಂಗಾಣ, ಆಂಧ್ರಪ್ರದೇಶದಲ್ಲಿ 13 ಪ್ರಕರಣಗಳು ದಾಖಲಾಗಿದ್ದು, ಪೊಲೀಸರ ಭಯದಿಂದ ಕೇರಳಕ್ಕೆ ಸ್ಥಳಾಂತರಗೊಂಡು ಅಲ್ಲಿ ಬಾಡಿಗೆ ಮನೆ ಮಾಲೀಕನಲ್ಲಿ 36 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದರೆ ಎರಡು ಪಟ್ಟು ಲಾಭ ಬರುತ್ತದೆ ಎಂದು ನಂಬಿಸಿ ವಂಚಿಸಿದ್ದ. ಅಲ್ಲದೆ ವಿಶಾಖಪಟ್ಟಣದಲ್ಲಿ ಕಳೆದ ವರ್ಷ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದ ಟಿಕೆಟ್ ಲಭ್ಯವಿದೆ ಎಂಬುದಾಗಿ ಪೋಸ್ಟ್ ಹಾಕಿ ಯುವಕನಿಗೆ ವಂಚಿಸಿದ್ದ. ಆಂಧ್ರದ ಆಡಳಿತ ಪಕ್ಷದ ಶಾಸಕನ ಪುತ್ರನೆಂದು ಹೇಳಿಕೊಂಡಿದ್ದ ಈತನಿಂದ ಟಿಕೆಟ್ ಖರೀದಿಗೆ ಮುಂದಾದ ಯುವಕನೊಬ್ಬ ಕರೆ ಮಾಡಿ ಟಿಕೆಟ್ ಕೇಳಿದಾಗ ಹಣ ಜಮೆ ಮಾಡುವಂತೆ ಹೇಳಿದ್ದ. ಆತ ಹಣ ಕಳುಹಿಸಿದ್ದರೂ ಬಂದಿಲ್ಲವೆಂದು ಹೇಳಿ ಮತ್ತೆ ಹಣ ಹಾಕಿಸಿಕೊಂಡು ಸುಮಾರು 2.62 ಲಕ್ಷ ರೂ. ವಂಚನೆ ಎಸಗಿದ್ದ.

ಮೋಸ ಅರಿವಾದ ಬಳಿಕ ಆ ಯುವಕ ರಾಚಕೊಂಡ ಸೈಬರ್​ ಕ್ರೈಂ ಪೊಲೀಸ್​ ವಿಭಾಗದಲ್ಲಿ ದೂರು ನೀಡಿದ್ದ. ಬಳಿಕ ಆತನನ್ನು ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದರು. ಆತನಿಂದ 8.9 ಲಕ್ಷ ರೂ. ಹಣ ಮತ್ತು ಎರಡು ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News