Thursday, February 29, 2024
Homeಸುದ್ದಿರಾಷ್ಟ್ರೀಯಕಿರಿಕಿರಿ ಆಗುತ್ತಿದೆ ಎಂದು ಮೋಹಿನಿಯಾಟ್ಟಂ ನೃತ್ಯ ಅರ್ಧಕ್ಕೆ ನಿಲ್ಲಿಸಿದ ನ್ಯಾಯಾಧೀಶ ಕಲಂ ಪಾಷಾ; ಅವಮಾನದಿಂದ ಕಣ್ಣೀರು...

ಕಿರಿಕಿರಿ ಆಗುತ್ತಿದೆ ಎಂದು ಮೋಹಿನಿಯಾಟ್ಟಂ ನೃತ್ಯ ಅರ್ಧಕ್ಕೆ ನಿಲ್ಲಿಸಿದ ನ್ಯಾಯಾಧೀಶ ಕಲಂ ಪಾಷಾ; ಅವಮಾನದಿಂದ ಕಣ್ಣೀರು ಹಾಕಿದ ಕಲಾವಿದೆ

‘ನನಗೆ ತುಂಬ ನೋವಾಗಿದೆ. ಹೃದಯವೇ ಕಿತ್ತು ಬಾಯಿಗೆ ಬರುವಷ್ಟು ಸಂಕಟವಾಗಿದೆ..ನೃತ್ಯವನ್ನು ನಿಲ್ಲಿಸುವಂತೆ ಹೇಳಿದ್ದು ಕೇವಲ ನನಗೆ ಮಾಡಿದ ಅವಮಾನವಲ್ಲ, ಕಲೆಗೆ-ಇಡೀ ಕೇರಳದ ಸಂಸ್ಕೃತಿಗೆ ಮಾಡಿದ ಅವಮಾನ’-ಇದು ಖ್ಯಾತ ಮೋಹಿನಿಯಾಟ್ಟಂ ನೃತ್ಯ ಕಲಾವಿದೆ ಡಾ. ನೀನಾ ಪ್ರಸಾದ್​ ನೋವಿನ ನುಡಿಗಳು. ಮಾರ್ಚ್​ 19ರಂದು ನಡೆದ ಕಹಿ ಘಟನೆಯನ್ನು ಜೀವನದಲ್ಲಿ ನೆನಪಿಸಿಕೊಳ್ಳಲೂ ಇಷ್ಟವಿಲ್ಲ ಎಂದೂ ಅವರು ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಅಂದಿನ ಘಟನೆಗೆ ರಾಜಕಾರಣಿಗಳು, ಸಾಮಾನ್ಯ ಜನರು, ನೆಟ್ಟಿಗರು ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. 

ನೀನಾ ಪ್ರಸಾದ್​ ಮೋಹಿನಿಯಾಟ್ಟಂ ಕಲಾವಿದೆ. ಮಾರ್ಚ್​ 19ರಂದು ಸಂಜೆ ಪಾಲಕ್ಕಾಡ್​ ಜಿಲ್ಲೆಯ, ಸರ್ಕಾರಿ ಮೋಯನ್​ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಇವರ ನೃತ್ಯಪ್ರದರ್ಶನ ಸಮಾರಂಭ ನಡೆಯುತ್ತಿತ್ತು. ಸಹಕಲಾವಿದರೊಟ್ಟಿಗೆ ಮನಮೋಹಕವಾಗಿ ಇವರು ನೃತ್ಯ ಮಾಡುತ್ತಿದ್ದರೆ, ಪ್ರೇಕ್ಷಕರೂ ತಲ್ಲೀನರಾಗಿ ನೋಡುತ್ತಿದ್ದರು. ಆದರೆ ಒಮ್ಮೆಲೇ ಬಂದ ಪೊಲೀಸರು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಆದೇಶಿಸಿದ್ದರು. ಅದಕ್ಕೆ ಕಾರಣ ಕಾರ್ಯಕ್ರಮ ನಡೆಯುತ್ತಿರುವ ಶಾಲೆಯ ಸಮೀಪದಲ್ಲೇ ವಾಸವಾಗಿದ್ದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಧೀಶ ಕಲಂ ಪಾಷಾ. ನೃತ್ಯ ಸಮಾರಂಭದಿಂದ ತೊಂದರೆಯಾಗುತ್ತಿದೆ, ಸ್ಪೀಕರ್​​ನಲ್ಲಿ ದೊಡ್ಡದಾಗಿ ಹಾಡು ಕೇಳುತ್ತಿದ್ದು ಇದರಿಂದ ಕಿರಿಕಿಯಾಗುತ್ತದೆ, ಹಾಗಾಗಿ ಕಾರ್ಯಕ್ರಮ ನಿಲ್ಲಿಸಿ ಎಂದು ಕಲಂ ಪಾಷಾ ಪೊಲೀಸರಿಗೆ ಆದೇಶ ನೀಡಿದ್ದರು. ಅವರ ಸೂಚನೆಯ ಹಿನ್ನೆಲೆಯಲ್ಲಿ ಪೊಲೀಸರು ಬಂದು ಕಾರ್ಯಕ್ರಮ ರದ್ದುಗೊಳಿಸಿದ್ದರು. ಆದರೆ ಅಂದು ನೀನಾ ಪ್ರಸಾದ್ ಮತ್ತು ಸಹಕಲಾವಿದರೆಲ್ಲರೂ ಕಣ್ಣಲ್ಲಿ ನೀರು ತುಂಬಿಕೊಂಡು ವೇದಿಕೆಯಿಂದ ಇಳಿದು ಹೋಗಿದ್ದಾರೆ. ಘಟನೆ ನಡೆದು ಐದು ದಿನಗಳಾಗಿದ್ದು, ಸೋಷಿಯಲ್ ಮೀಡಿಯಾದಂತೂ ವ್ಯಾಪಕ ಚರ್ಚೆಯಾಗುತ್ತಿದೆ. ರಾಜಕಾರಣಿಗಳೂ ಕೂಡ ಇದನ್ನು ಖಂಡಿಸುತ್ತಿದ್ದು, ಕೇರಳವೂ ತಾಲಿಬಾನ್​ ಆಡಳಿತಕ್ಕೊಳಪಟ್ಟ ಅಫ್ಘಾನಿಸ್ತಾನದಂತೆ ಆಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ನೃತ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದರಿಂದ ಬೇಸರಗೊಂಡ ನೃತ್ಯ ಕಲಾವಿದೆ ನೀನಾ ಪ್ರಸಾದ್​ ತಮ್ಮ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಹಾಕಿದ್ದರು. ಮಾ.19ರಂದು ರಾತ್ರಿ 8ಗಂಟೆಗೆ ಶುರವಾಗಬೇಕಿದ್ದ ನಮ್ಮ ಮೋಹಿನಿಯಾಟ್ಟಂ ನೃತ್ಯ ಸ್ವಲ್ಪ ತಡವಾಗಿಯೇ ಶುರುವಾಗಿತ್ತು. ಕೇರಳದ ವಿವಿಧ ಭಾಗಗಳಲ್ಲಿ ವಾಸಿಸುವ ಕಲಾವಿದರನ್ನು ಒಳಗೊಂಡ ತಂಡ ನಮ್ಮದು. ನಾವೆಲ್ಲರೂ ಈ ಕಾರ್ಯಕ್ರಮಕ್ಕಾಗಿ ತುಂಬ ರಿಹರ್ಸಲ್​ ಮಾಡಿ, ಉತ್ಸಾಹದಿಂದ ತಯಾರಾಗಿದ್ದೆವು. ಆದರೆ ಅಂದು ನ್ಯಾಯಾಧೀಶರಾದ ಕಲಾಂ ಪಾಷಾರಿಗೆ ಕಿರಿಕಿರಿಯಾದ ಕಾರಣಕ್ಕೆ ನಮ್ಮನ್ನು ತಡೆಯಲಾಯಿತು. ನಮ್ಮ ಸಂಗೀತ-ನೃತ್ಯದಿಂದ ತೊಂದರೆಯಾಗುತ್ತಿದೆ ಎಂದು ಪೊಲೀಸರು ಬಂದು ಹೇಳಿದರು. ಕಲಾವಿದನ ಜೀವನ, ಅವರ ಕಾರ್ಯಸ್ಥಾನಕ್ಕೆ ಅದರದ್ದೇ ಆದ ಘನತೆ ಇರುತ್ತದೆ. ಗೌರವದಿಂದ ಕಾಣಬೇಕು. ನಮ್ಮಂಥ ಕಲಾವಿದರಿಗೂ ಸ್ವಾಭಿಮಾನ ಇರುತ್ತದೆ ಎಂಬುದನ್ನು ನೆನಪಿಡಬೇಕು ಎಂದು ಹೇಳಿದ್ದರು.

ಬಿಜೆಪಿ ಕೇಂದ್ರ ಸಚಿವರ ಪ್ರತಿಕ್ರಿಯೆ

ಡಾ. ನೀನಾ ಪ್ರಸಾದ್ ಸೋಷಿಯಲ್ ಮೀಡಿಯಾ ಪೋಸ್ಟ್​ನ್ನು ಶೇರ್ ಮಾಡಿಕೊಂಡಿರುವ ಕೇಂದ್ರ ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ.ಮುರಳೀಧರನ್​ ಅವರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಡಳಿತದಡಿಯಲ್ಲಿ ಕೇರಳವನ್ನೂ ತಾಲಿಬಾನೀಕರಣ ಮಾಡಲಾಗುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. ಮೋಹಿಯಾಟ್ಟಂ ಕೇರಳದ ಸಂಸ್ಕೃತಿ ಬಿಂಬಿಸುವ ನೃತ್ಯ. ಆ ನೃತ್ಯ ಪ್ರದರ್ಶನ ಮಾಡುತ್ತಿದ್ದ ನೀನಾ ಪ್ರಸಾದ್​ರನ್ನು ಅರ್ಧಕ್ಕೆ ತಡೆದದ್ದು ಖಂಡನೀಯ. ಪಿಣರಾಯಿ ವಿಜಯನ್​  ಅವರ ಕಮ್ಯೂನಿಸ್ಟ್ ಆಡಳಿತದಲ್ಲಿ ಕಲಾವಿದರಿಗೆ ಸ್ವಾತಂತ್ರ್ಯವಿಲ್ಲ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News