Tuesday, April 23, 2024
Homeಸುದ್ದಿಬಪ್ಪನಾಡು ಜಾತ್ರೆಯಲ್ಲಿ ಇತರ ಧರ್ಮೀಯರು ವ್ಯಾಪಾರ ನಡೆಸಲು ಯಾವುದೇ ನಿರ್ಬಂಧವಿಲ್ಲ: ಮೊಕ್ತೇಸರರು

ಬಪ್ಪನಾಡು ಜಾತ್ರೆಯಲ್ಲಿ ಇತರ ಧರ್ಮೀಯರು ವ್ಯಾಪಾರ ನಡೆಸಲು ಯಾವುದೇ ನಿರ್ಬಂಧವಿಲ್ಲ: ಮೊಕ್ತೇಸರರು

ಬಪ್ಪನಾಡು ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧದ ವಿಚಾರವಾಗಿ ಸಾಮರಸ್ಯವನ್ನು ಎತ್ತಿ ಹಿಡಿದಿರುವ ಕ್ಷೇತ್ರದ ಆಡಳಿತ ಮಂಡಳಿ ಭಕ್ತರು ಕ್ಷೇತ್ರದ ಸೌಹಾರ್ದತೆಗೆ, ಸಾಮರಸ್ಯಕ್ಕೆ ಪ್ರೋತ್ಸಾಹ ನೀಡಬೇಕು. ಈ ಕ್ಷೇತ್ರದಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಬದುಕಲು ಅಡ್ಡಗಾಲು ಹಾಕುವುದು ಸರಿಯಲ್ಲ ಎಂದು ಹೇಳಿದೆ.

ಈ ವಿಚಾರವಾಗಿ ಮಾತನಾಡಿರುವ ಬಪ್ಪನಾಡು ಕ್ಷೇತ್ರದ ಹಿಂದೂ ಧಾರ್ಮಿಕ ಮುಖಂಡ, ಮಾಜಿ ಮೊಕ್ತೇಸರ ಹರಿಕೃಷ್ಣ ಪುನರೂರು ಅವರು, ಭಾರತದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಕೆಲಸ ಮಾಡಿ ಬದುಕಲು ಜಾತಿಯನ್ನು ನೋಡಬಾರದು. ಮತಾಂತರ ಮಾಡಿದರೆ ಅವರನ್ನು ಪ್ರಶ್ನೆ ಮಾಡಬಹುದು. ಆದರೆ ಬದುಕಲು ಅಡ್ಡಗಾಲು ಹಾಕುವುದು ಸರಿಯಲ್ಲ.

ಯಾರೇ ಆಗಲಿ ಅವರ ವ್ಯಾಪಾರಕ್ಕೆ ಅಡ್ಡಿ ಮಾಡಬಾರದು. ನಾನು 11 ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಆಡಳಿತ ಮೊಕ್ತೇಸರನಾಗಿ ಕೆಲಸ ಮಾಡಿದ್ದೇನೆ. ಬಪ್ಪ ಬ್ಯಾರಿ ಎಂಬ ಮುಸ್ಲಿಂ ವ್ಯಕ್ತಿ ಈ ಕ್ಷೇತ್ರವನ್ನು ಜಿರ್ಣೋದ್ಧಾರ ಮಾಡಿದ ಇತಿಹಾಸವಿದೆ ಎಂದರು. ಈ ದೇವಸ್ಥಾನಕ್ಕೆ ಕೈ ಮುಗಿಯಲು ಮುಸ್ಲಿಂ, ಕ್ರೈಸ್ತರು ಬರುತ್ತಾರೆ. ಈ ಪುಣ್ಯಕ್ಷೇತ್ರದಲ್ಲಿ ನಾವೇ ಜಗಳವನ್ನು ಎಳೆಯಬಾರದು ಎಂದು ಮನವಿ ಮಾಡಿದರು

ಈ ಕ್ಷೇತ್ರ 32 ಗ್ರಾಮಗಳಿಗೆ ಸಂಬಂಧಪಟ್ಟ ದೇವಸ್ಥಾನವಾಗಿದೆ. ಮತಾಂತರ ಮಾಡಿದರೆ ಪ್ರತಿಭಟನೆ ಮಾಡಬಹುದು. ಆದರೆ ಸೌಹಾರ್ದಯುತವಾಗಿ ಬಾಳಲು ಅಡ್ಡಿ ಮಾಡಬಾರದು.
ಭಕ್ತರು ಕ್ಷೇತ್ರದ ಸೌಹಾರ್ದತೆಗೆ, ಸಾಮರಸ್ಯಕ್ಕೆ ಪ್ರೋತ್ಸಾಹ ನೀಡಬೇಕು. ಈ ಕ್ಷೇತ್ರದಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಕೆಲವರು ಸೌಹಾರ್ದತೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಆಡಳಿತ ಮಂಡಳಿಗೆ ಆ ಉದ್ದೇಶ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ದೇವಸ್ಥಾನದ ಆಡಳಿತ ಸಮಿತಿಯ ಹೆಸರಿನಲ್ಲಿ ಬರೆಯಲಾಗಿದ್ದ ಬ್ಯಾನರ್ ತೆರವು

ಇತ್ತೀಚೆಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಮತ್ತು ಬಸ್ಸು ನಿಲ್ದಾಣದಲ್ಲಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶವಿಲ್ಲ ಎಂಬ ಅರ್ಥದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಹೆಸರಿನಲ್ಲಿ ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು. ಈ ಬಗ್ಗೆ ಬೆಳಗ್ಗೆ ತುರ್ತು ಸಭೆ ನಡೆಸಿದ ಆಡಳಿತ ಮಂಡಳಿ, ಆ ಬ್ಯಾನರ್ ಗಳನ್ನು ತೆರವು ಮಾಡಿತ್ತು. ಆ ಬಳಿಕ ʼಸಮಸ್ತ ಹಿಂದೂ ಬಾಂಧವರುʼ ಎಂಬ ಹೆಸರಿನಲ್ಲಿ ಮತ್ತೊಂದು‌ ಬ್ಯಾನರನ್ನು ಅಳವಡಿಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News