ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಎಕ್ಸ್‌ನಲ್ಲಿ CJP_2029 ಯೂಸರ್‌ನೇಮ್ ಹೊಂದಿದ್ದ ಖಾತೆ ತೆರೆಯಲು ಪ್ರಯತ್ನಿಸಿದಾಗ, “Account Withheld in India in response to a legal demand” ಎಂಬ ಸಂದೇಶ ಕಾಣಿಸುತ್ತಿದೆ.
ಈ ಕುರಿತು X ಸಂಸ್ಥೆ ಸ್ಪಷ್ಟನೆ ನೀಡಿದ್ದು, “ಅಧಿಕೃತ ಸಂಸ್ಥೆಯಿಂದ ಮಾನ್ಯ ಹಾಗೂ ಸರಿಯಾದ ಕಾನೂನುಬದ್ಧ ವಿನಂತಿ ಬಂದಾಗ, ಕೆಲವು ದೇಶಗಳಲ್ಲಿ ನಿರ್ದಿಷ್ಟ ವಿಷಯ ಅಥವಾ ಖಾತೆಗಳನ್ನು ನಿರ್ಬಂಧಿಸುವ ಅಗತ್ಯ ಉಂಟಾಗಬಹುದು” ಎಂದು ಹೇಳಿದೆ.
“ಇಂತಹ ನಿರ್ಬಂಧಗಳು ಕೇವಲ ಆ ದೇಶದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರುತ್ತವೆ. ಅಲ್ಲಿನ ಸ್ಥಳೀಯ ಕಾನೂನು ಉಲ್ಲಂಘನೆಯ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ” ಎಂದು X ತಿಳಿಸಿದೆ.

ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’? : ಹಿರಿಯ ವಕೀಲರ ಪದನಾಮಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ, ಉದ್ಯೋಗವಿಲ್ಲದ ಕೆಲ ಯುವಕರು ವ್ಯವಸ್ಥೆಯ ವಿರುದ್ಧ ಜಿರಳೆಗಳಂತೆ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿತ್ತು. ಮಾಧ್ಯಮ, ಸಾಮಾಜಿಕ ಜಾಲತಾಣ ಮತ್ತು ಆರ್‌ಟಿಐ ಕಾರ್ಯಕರ್ತರ ಬಗ್ಗೆ ಮಾಡಿದ ಈ ಟೀಕೆಯ ನಂತರ ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿತ್ತು.
ಯುವಕರಿಂದ ಹೊಸ ರಾಜಕೀಯ ವ್ಯಂಗ್ಯ ಅಭಿಯಾನ : ಅಭಿಜೀತ್ ದಿಪ್ಕೆ ಎಂಬ ಯುವಕ ಈ ಹೆಸರಿನಲ್ಲಿ ಎಕ್ಸ್ ಖಾತೆ ಮತ್ತು ವೆಬ್‌ಸೈಟ್ ಆರಂಭಿಸಿ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸುವ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದರು. ಕೆಲವೇ ದಿನಗಳಲ್ಲಿ ಈ ಖಾತೆಗೆ ದೊಡ್ಡ ಮಟ್ಟದ ಜನಮೆಚ್ಚುಗೆ ದೊರೆತಿದ್ದು, ವಿಶೇಷವಾಗಿ Gen Z ಯುವಕರಿಂದ ಬೆಂಬಲ ವ್ಯಕ್ತವಾಗಿತ್ತು.
ವಿಶೇಷವಾಗಿ, Cockroach Janata Party ಯ Instagram ಖಾತೆಗೆ 15.2 ಮಿಲಿಯನ್ ಫಾಲೋವರ್ಸ್ ಇದ್ದು, ಬಿಜೆಪಿ Instagram ಖಾತೆಗೆ 8.8 ಮಿಲಿಯನ್ ಫಾಲೋವರ್ಸ್ ಮಾತ್ರ ಇರುವುದಾಗಿ ಹೇಳಲಾಗಿದೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ CJP ವೇಗವಾಗಿ ಜನಪ್ರಿಯವಾಗುತ್ತಿದ್ದುದನ್ನು ಕಾಣಬಹುದು.
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ : ‘Cockroach Janata Party’ ಖಾತೆ ತಡೆಹಿಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ರಾಜಕೀಯ ಉದ್ದೇಶದ ಪ್ರಚಾರ ಎಂದು ಟೀಕಿಸುತ್ತಿದ್ದಾರೆ.



