ಮಲ್ಪೆ: ಎರಡು ತಿಂಗಳು ಲಂಗರು ಹಾಕಲಾಗಿದ್ದ ಯಾಂತ್ರಿಕ ಬೋಟುಗಳು ಮತ್ತೆ ಕಡಲಿಗಿಳಿದಿದ್ದು, ಇಲ್ಲಿನ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆಗೆಳು ಆರಂಭವಾಗಿದ್ದು ಜನರ ಓಡಾಟ ಚುರುಕು ಪಡೆದುಕೊಂಡಿದೆ.
ಆ.1ರಿಂದ ಯಾಂತ್ರಿಕ ಮೀನುಗಾರಿಕೆ ಆರಂಭಕ್ಕೆ ಅವಕಾಶವಿದ್ದರೂ ಬಿರುಸಾದ ಮಳೆಗಾಳಿಯಿಂದಾಗಿ ಯಾರೂ ಸಮುದ್ರಕ್ಕೆ ಇಳಿದಿರಲಿಲ್ಲ. ಈಗ ಮಳೆಯ ಅಬ್ಬರ ತಗ್ಗಿದ್ದು, ನಾಗಪಂಚಮಿಯಂದು ಬಹುತೇಕ ಆಳಸಮುದ್ರ ಬೋಟುಗಳು ಮೀನುಗಾರಿಕೆಗೆ ತೆರಳಿವೆ.
ಮಲ್ಪೆ ವ್ಯಾಪ್ತಿಯಲ್ಲಿ ಸುಮಾರು 1,700ರಷ್ಟು ಆಳಸಮುದ್ರ ಬೋಟುಗಳಿವೆ. ಶೇ. 50ರಷ್ಟು ಆಳಸಮುದ್ರ ಬೋಟುಗಳು ಕಡಲಿಗೆ ಇಳಿದಿವೆ. ಮೀನುಗಾರಿಕೆ ಚುರುಕಾದ ಹಿನ್ನೆಲೆಯಲ್ಲಿ ಮಲ್ಪೆಯ ಆರ್ಥಿಕ ಚಟುವಟಿಕೆಗಳೂ ಬಿರುಸಾಗುತ್ತಿವೆ.
ಇಲ್ಲಿ ದುಡಿಯುವ ತಮಿಳುನಾಡು, ಆಂಧ್ರಪ್ರದೇಶದ ಮೀನುಗಾರರು ಆ. 6-7ರಂದು ಮೀನುಗಾರಿಕೆಗೆ ತೆರಳಿದ್ದಾರೆ. ಭಟ್ಕಳ – ಕುಮಟಾ ಮತ್ತು ಸ್ಥಳೀಯ ಮೀನುಗಾರರು ನಾಗರಪಂಚಮಿಯ ಬಳಿಕ ಕಡಲಿಗಿಳಿ
ದಿದ್ದು, ರವಿವಾರದೊಳಗೆ ಶೇ.50ರಷ್ಟು ಬೋಟುಗಳು ನೀರಿಗಿಳಿದಿವೆ.
ನಾಡದೋಣಿ ಹಿನ್ನೆಡೆ
ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ನಾಡದೋಣಿ ಮೀನುಗಾರಿಕೆಗೆ ಹಿನ್ನೆಡೆಯಾಗಿದೆ. ಈ ಬಾರಿ ಪಟ್ಟೆಬಲೆ, ಡಿಸ್ಕೋ ಮೀನುಗಾರಿಕೆಗೆ ಉತ್ತಮ ಅವಕಾಶ ಸಿಕ್ಕಿರಲಿಲ್ಲ. ವಾರದಿಂದ ನಾಡದೋಣಿಗಳು ನೀರಿಗಿಳಿದಿದ್ದರೂ ಹೇಳಿಕೊಳ್ಳುವಷ್ಟು ಮೀನು ಸಿಕ್ಕಿರಲಿಲ್ಲ. ಈಗ ಮೀನುಗಾರರು ಆಳಸಮುದ್ರ ಬೋಟಿನಲ್ಲಿ ದುಡಿಯುತ್ತಿರುವುದರಿಂದ ನಾಡದೋಣಿ ಮೀನುಗಾರಿಕೆಗೆ ಮುಕ್ತಾಯ ಹಾಡಬೇಕಾಗಿದೆ. ಮಳೆಗಾಲದಲ್ಲಿ ನಾಡದೋಣಿಗೆ ಸಾಕಷ್ಟು ಪ್ರಮಾಣದಲ್ಲಿ ಮೀನು ಲಭ್ಯವಾಗದ ಕಾರಣ ಯಾಂತ್ರಿಕ ಮೀನುಗಾರಿಕೆಗೆ ಹೇರಳ ಮತ್ಸé ಸಂಪತ್ತು ದೊರಕಬಹುದು ಎನ್ನುವ ವಿಶ್ವಾಸ ಮೀನುಗಾರರಲ್ಲಿದೆ.
ಆ. 19: ಸಮುದ್ರಪೂಜೆ, ರಜೆ
ಮಲ್ಪೆ ಮೀನುಗಾರರ ಸಂಘದ ವತಿಯಿಂದ ಆ. 19ರಂದು ಸಮುದ್ರಪೂಜೆ ನಡೆಯಲಿದೆ. ಬೆಳಗ್ಗೆ 8ಕ್ಕೆ ವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ ಪ್ರಾರ್ಥನೆ, ಬಳಿಕ ಮೆರವಣಿಗೆಯೊಂದಿಗೆ ಸಾಗಿ ಸಮುದ್ರತೀರದಲ್ಲಿ ಪೂಜೆ ನಡೆಯಲಿದೆ. ಅಂದು ಬಂದರಿನ ಮೀನುಗಾರಿಕೆ ಚಟುವಟಿಕೆಗಳಿಗೆ ರಜೆ ಸಾರಲಾಗಿದೆ.