ಮುರಿದು ಬಿದ್ದ ಕಾಳಿ ನದಿ ಸೇತುವೆ: ಕಾರವಾರ-ಗೋವಾ ಸಂಚಾರ ತಾತ್ಕಾಲಿಕ ಬಂದ್

ಕಾರವಾರ, ಆ. 07: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಕೋಡಿಭಾಗ್ ಸೇತುವೆ ಕಾಳಿ ನದಿಗೆ ಬಿದ್ದು ತಮಿಳುನಾಡು ಮೂಲದ ಲಾರಿ ನದಿಗೆ ಉರುಳಿದೆ.

ಅದೃಷ್ಟವಶಾತ್, ಲಾರಿ ಚಾಲಕನನ್ನು ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಎಸ್​ಪಿ ನಾರಾಯಣ ಭೇಟಿ ನೀಡಿದ್ದು, ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದುವರೆಗೂ ಬಂದ ಮಾಹಿತಿ ಪ್ರಕಾರ ಒಂದೇ ಲಾರಿ ಬಿದ್ದಿದೆ. ಕಾರ್ಯಾಚರಣೆ ಮುಂದುವರೆದಿದೆ. ಇದುವರೆಗೂ ಬೇರೆ ಮಾಹಿತಿ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ.

ಅಬ್ಬರದ ಮಳೆ, ತುಂಬಿ ಹರಿಯುತ್ತಿರುವ ಕಾಳಿ ನದಿಯ ಸವಾಲಿನ ಮಧ್ಯೆಯೂ ಕರಾವಳಿ ಕಾವಲು ಪಡೆ, ಎಸ್​​ಡಿಆರ್​​ಎಫ್ ಮತ್ತು ಎನ್​ಡಿಆರ್​ಎಫ್ ಕಾರ್ಯಾಚರಣೆ ಮುಂದುವರೆದಿದೆ ಎಂದು ನಾರಾಯಣ ತಿಳಿಸಿದ್ದಾರೆ. ಅಬ್ಬರದ ಮಳೆಯಿಂದಾಗಿ ಕಾಳಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಲಾರಿ ಚಾಲಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಮಧ್ಯರಾತ್ರಿ ಏಕಾಏಕಿ ಕೋಡಿಭಾಗ್ ಸೇತುವೆ ಕುಸಿದು ಬಿದ್ದಿತು. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಲಾರಿ ಚಾಲಕ ಬಾಲಮುರುಗನ್​ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್​ಪಿ ನಾರಾಯಣ ತಿಳಿಸಿದ್ದಾರೆ.

41 ವರ್ಷಗಳ ಹಿಂದೆ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ 66 ನಿರ್ಮಾಣದ ವೇಳೆ ಒಂದೇ ಒಂದು ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇನ್ನೊಂದು ಮಾರ್ಗಕ್ಕೆ ಹಳೆ ಸೇತುವೆಯನ್ನೇ ಬಳಸಲಾಗುತ್ತಿತ್ತು. ಸದ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್​ಬಿ ಕಂಪನಿ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top