Friday, April 19, 2024
Homeಸುದ್ದಿನವೆಂಬರ್ ತಿಂಗಳ ಅಂತ್ಯದೊಳಗೆ ಸುರತ್ಕಲ್ ಟೋಲ್ ಗೇಟ್ ತೆರವು: ಸಚಿವ ಸುನಿಲ್ ಕುಮಾರ್

ನವೆಂಬರ್ ತಿಂಗಳ ಅಂತ್ಯದೊಳಗೆ ಸುರತ್ಕಲ್ ಟೋಲ್ ಗೇಟ್ ತೆರವು: ಸಚಿವ ಸುನಿಲ್ ಕುಮಾರ್

ಉಡುಪಿ: ಸುರತ್ಕಲ್ ಟೋಲ್‌ ಗೇಟ್ ತೆರವು ಕಾರ್ಯ ಅಂತಿಮ ಹಂತದಲ್ಲಿದ್ದು, ನವೆಂಬರ್ ತಿಂಗಳಾಂತ್ಯಕ್ಕೆ ಟೋಲ್‌ಗೇಟ್ ತೆರವಾಗಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ಕುಮಾರ್ ಹೇಳಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಮಾತನಾಡಿದ ಅವರು, ಈಗಾಗಲೇ ಸುರತ್ಕಲ್ ಟೋಲ್ ಗೇಟ್ ತೆರವು ಕುರಿತು ಸುದೀರ್ಘ ಚರ್ಚೆ ನಡೆದಿದೆ. ನನಗಿರುವ ಮಾಹಿತಿ ಪ್ರಕಾರ ನವೆಂಬರ್ ಅಂತ್ಯಕ್ಕೆ ತೆರವಾಗಲಿದೆ ಎಂದರು.

ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ವಿರುದ್ದ ಅಶ್ಲೀಲ ಟ್ರೋಲ್ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ‘ನೋ ಕಮೆಂಟ್ಸ್’ ಎಂದಷ್ಟೇ ಪ್ರತಿಕ್ರಿಯಿಸಿದರು.

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಆಗ್ರಹ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವನ್ನು ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. 180ಕ್ಕೂ ಹೆಚ್ಚು ಭಾಷೆಗಳು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಸರದಿಯಲ್ಲಿವೆ. ಸಂಸದರ ಮೂಲಕವಾಗಿ ನಾವು ಒತ್ತಡ ಹಾಕುತ್ತಿದ್ದೇವೆ. ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬ ಬಗ್ಗೆ ನಮಗೆ ಯಾವುದೇ ಸುಳಿವು ದೊರೆಯುವುದಿಲ್ಲ. ತುಳುವನ್ನು ರಾಜ್ಯಭಾಷೆಯಾಗಿ ಸೇರ್ಪಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ದಾಖಲೆಗಳನ್ನು ಕಾನೂನು ವಿಭಾಗಕ್ಕೆ ನೀಡಲಾಗಿದ್ದು, ಶೀಘ್ರ ತುಳು ರಾಜ್ಯ ಭಾಷೆಯಾಗಿ ಘೋಷಣೆಯಾಗಲಿದೆ ಎಂದು ತಿಳಿಸಿದರು.

ತುಳು ಭಾಷೆ ಬೋಧಿಸುವ ಶಿಕ್ಷಕರಿಗೆ ಸಂಬಳ ನೀಡದಿರುವ ವಿಚಾರಕ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ತುಳು ಶಿಕ್ಷಕರು ತುಳು ಅಕಾಡೆಮಿ ಮುಖಾಂತರ ನೇಮಕಗೊಂಡವರು. ಅವರು ಶಿಕ್ಷಕರಿಗೆ ಗೌರವಧನ ನೀಡುತ್ತಿದ್ದರು. ಅದು ಸಂಬಳವಲ್ಲ. ಆದರೆ ಕೋವಿಡ್ ನಂತರ ಈ ಗೌರವಧನ ನೀಡುವಿಕೆ ಸ್ಥಗಿತಗೊಂಡಿದೆ. ಈ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದರು.

ಕಚ್ಚಾ ವಸ್ತುಗಳು ಮತ್ತು ಕಲ್ಲಿದ್ದಲು ದರಕ್ಕನುಗುಣವಾಗಿ ವಿದ್ಯುತ್ ದರ ಪರಿಷ್ಕರಣೆಯಾಗುತ್ತದೆ. 2014ರಿಂದಲೇ ಇದನ್ನು ಮಾಡಲಾಗುತ್ತಿದೆ. ವರ್ಷದಲ್ಲಿ ಒಮ್ಮೆ ಮಾತ್ರ ವಿದ್ಯುತ್ ದರ ಪರಿಷ್ಕರಿಸುವಂತೆ ವ್ಯವಸ್ಥೆ ಮತ್ತು ಯೋಜನೆಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದೇನೆ.

ಪ್ರಿಪೇಯ್ಡ್‌ ಮೀಟರ್‌ಗಳನ್ನು ಮೊದಲು ಸರ್ಕಾರಿ ಇಲಾಖೆಗಳಲ್ಲಿ ಅಳವಡಿಸಲಾಗುವುದು. ಸರ್ಕಾರಿ ಇಲಾಖೆಗಳಿಂದ ಇಂಧನ ಇಲಾಖೆಗೆ ಸುಮಾರು 6 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಪಾವತಿಯಾಗಲು ಬಾಕಿ ಇದೆ ಎಂದವರು ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News