ನವದೆಹಲಿ: ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮುಗಿದ ಬೆನ್ನಲ್ಲೇ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆಯಾಗಿದೆ.
ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ನಲ್ಲಿ(MCX) 10 ಗ್ರಾಂ ಚಿನ್ನದ ಬೆಲೆ 3,916 ರೂ. ಇಳಿಕೆಯಾಗಿದ್ದರೆ 1 ಕೆಜಿ ಬೆಳ್ಳಿ ದರ 4,213 ರೂ. ಇಳಿಕೆಯಾಗಿದೆ. ಅಂತಿಮವಾಗಿ 10 ಗ್ರಾಂ ಚಿನ್ನದ ದರ 68,789 ರೂ. ಕೊನೆಯಾದರೆ 1 ಕೆಜಿ ಬೆಳ್ಳಿ ದರ 84,990 ರೂ.ನಲ್ಲಿ ಅಂತ್ಯವಾಗಿದೆ.
ಬಜೆಟ್ ಪ್ರಸ್ತಾಪ ಅಲ್ಲದೇ ವಿಶ್ವದೆಲ್ಲೆಡೆ ನಡೆಯುತ್ತಿರುವ ಹಲವು ವಿದ್ಯಮಾನಗಳಿಂದ ಚಿನ್ನ ಬೆಳ್ಳಿ ದರ ಇಳಿಕೆಯಾಗುತ್ತಿದೆ. ಈ ಬಜೆಟ್ನಲ್ಲಿ ಚಿನ್ನ ಮತ್ತು ಬೆಳ್ಳಿಯ ಆಮದು ಸುಂಕವನ್ನು ಕಡಿತ ಮಾಡಿದ್ದರಿಂದ ಆಭರಣಗಳ ದರ ಇಳಿಕೆಯಾಗಲಿದೆ.
ಈ ಮೊದಲು ಚಿನ್ನ ಮತ್ತು ಬೆಳ್ಳಿಗೆ 15% ಆಮದು ಸುಂಕ ವಿಧಿಸಲಾಗುತ್ತಿತ್ತು. ಆದರೆ ಈಗ ಆಮದು ಸುಂಕವನ್ನು 6% ಇಳಿಕೆ ಮಾಡಲಾಗಿದೆ.
ದೇಶದಲ್ಲಿ ಚಿನ್ನ ಮತ್ತು ಬೆಲೆಬಾಳುವ ಲೋಹದ ಆಭರಣಗಳಲ್ಲಿ ದೇಶೀಯ ಮೌಲ್ಯವರ್ಧನೆ ಹೆಚ್ಚಿಸಲು ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಕ್ಕೆ ಮತ್ತು ಪ್ಲಾಟಿನಂ ಮೇಲೆ 6.4% ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
6% ತೆರಿಗೆ ಹೇಗೆ?
ಚಿನ್ನ ಮತ್ತು ಬೆಳ್ಳಿ ಮೇಲಿನ ಅಮದು ಸುಂಕವನ್ನು 10% ರಿಂದ 5% ಇಳಿಕೆ ಮಾಡಿದ್ದರೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ (AIDC) 5% ರಿಂದ 1% ಕ್ಕೆ ಇಳಿಸಲಾಗಿದೆ. ಹೀಗಾಗಿ ಈ ಬಜೆಟ್ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲೆ 6% ತೆರಿಗೆ ವಿಧಿಸುವ ಪ್ರಸ್ತಾಪ ಮಾಡಲಾಗಿದೆ.